ಇಸ್ರೇಲ್, ಜೂ. 09(DaijiworldNews/AA): ಹಮಾಸ್ ಉಗ್ರರ ಸೆರೆಯಲ್ಲಿದ್ದ ನಾಲ್ವರು ಇಸ್ರೇಲ್ ಪ್ರಜೆಗಳನ್ನು ರಕ್ಷಿಸಲಾಗಿದೆ. ವಿಶೇಷ ಕಾರ್ಯಾಚರಣೆ ನಡೆಸಿದ್ದು, ಸೆರೆಯಲ್ಲಿದ್ದ ನಾಲ್ವರನ್ನು ರಕ್ಷಿಸಿ ತಮ್ಮ ದೇಶಕ್ಕೆ ಸುರಕ್ಷಿತವಾಗಿ ಕರೆತರುವಲ್ಲಿ ಯಶಸ್ವಿಯಾಗಿದೆ.
ಇಸ್ರೇಲ್ ರಕ್ಷಣಾ ಪಡೆ ನಡೆಸಿದ ಈ ರಕ್ಷಣಾ ಕಾರ್ಯಾಚರಣೆಯಲ್ಲಿ ದುರಾದೃಷ್ಟವಶಾತ್ ಒಬ್ಬ ಇಸ್ರೇಲ್ ಯೋಧ ಹುತಾತ್ಮನಾಗಿದ್ದಾರೆ. ರಕ್ಷಿಸಲ್ಪಟ್ಟ ಒತ್ತೆಯಾಳುಗಳನ್ನು ನೋವಾ ಅರ್ಗಾಮನಿ(25), ಅಲ್ಮೋಗ್ ಮೀರ್ ಜಾನ್ (21), ಆಂಡ್ರೆ ಕೊಜ್ಲೋವ್ (27) ಹಾಗೂ ಶ್ಲೋಮಿ ಝಿವ್ (40) ಎಂದು ತಿಳಿದುಬಂದಿದೆ. ಈ ನಾಲ್ವರನ್ನು ಹಮಾಸ್ ಉಗ್ರರು 2023ರ ಅಕ್ಟೋಬರ್ 7ರಂದು ಸೂಪರ್ನೋವಾ ಸಂಗೀತ ರಸಮಂಜರಿ ಕಾರ್ಯಕ್ರಮದ ವೇಳೆ ಅಪಹರಿಸಿ ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಹಮಾಸ್ ಉಗ್ರರು ಗಾಜಾ ಪಟ್ಟಿಯಲ್ಲಿ ಒತ್ತೆಯಾಳುಗಳಾಗಿದ್ದ ಈ ನಾಲ್ವರು ಇದೀಗ 265 ದಿನಗಳ ಬಳಿಕ ತಾಯ್ನಾಡಿಗೆ ವಾಪಾಸ್ಸಾಗಿದ್ದಾರೆ.
ತಾಯ್ನಾಡಿಗೆ ಸುರಕ್ಷಿತವಾಗಿ ಮರಳಿರುವ ಈ ನಾಲ್ವರ ಕುಟುಂಬಸ್ಥರ ಖುಷಿಗೆ ಪಾರವೇ ಇಲ್ಲ ಎಂಬಂತಾಗಿದೆ. ಉಗ್ರರ ಸೆರೆಯಲ್ಲಿದ್ದ ಇವರನ್ನು ರಕ್ಷಿಸಿ ಆರೋಗ್ಯ ತಪಾಸಣೆಗಾಗಿ ಆರೋಗ್ಯ ಕೇಂದ್ರಗಳಿಗೆ ಕಳುಹಿಸಲಾಗಿದೆ. ಇನ್ನು ಈ ನಾಲ್ವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ತಾವು ಆರೋಗ್ಯವಾಗಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಅಧಿಕೃತ ಮಾಹಿತಿ ನೀಡಿರುವ ಇಸ್ರೇಲ್, ಗಾಜಾದಲ್ಲಿ ಸೆರೆಯಾಗಿದ್ದ ನಾಲ್ವರನ್ನು ನಾವು ಸುರಕ್ಷಿತವಾಗಿ ರಕ್ಷಿಸಿದ್ದೇವೆ. ಕಾರ್ಯಾಚರಣೆ ವೇಳೆ ಕೆಲವು ಸಾವು ನೋವುಗಳು ಉಂಟಾಗಿದೆ. ಬರೋಬ್ಬರಿ 251 ಇಸ್ರೇಲಿ ಪ್ರಜೆಗಳು ಹಮಾಸ್ ಉಗ್ರ ಕೈಗೆ ಸಿಲುಕಿಕೊಂಡಿದ್ದು, ಅವರಲ್ಲಿ 116 ಜನ ಸದ್ಯ ಗಾಜಾದಲ್ಲಿದ್ದಾರೆ. ಯೋಧರು ಸೇರಿದಂತೆ ಒಟ್ಟು 41 ಮಂದಿ ಮೃತಪಟ್ಟಿದ್ದಾರೆ.