ಜಿನೀವಾ, ಜೂ.22(DaijiworldNews/AA): ವಿಶ್ವದ ಶ್ರೀಮಂತ ಕುಟುಂಬಗಳಲ್ಲಿ ಒಂದಾದ, ಭಾರತ ಮೂಲದ ಉದ್ಯಮಿ ಪ್ರಕಾಶ್ ಹಿಂದುಜಾ ಸೇರಿ ಅವರ ಕುಟುಂಬದ ನಾಲ್ವರ ವಿರುದ್ಧ ಕಾರ್ಮಿಕರನ್ನು ಶೋಷಣೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆ ಸ್ವಿಟ್ಜರ್ಲ್ಯಾಂಡ್ ನ್ಯಾಯಾಲಯವು 4 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಕುಟುಂಬದ ಪ್ರಕಾಶ್ ಹಿಂದೂಜಾ, (78), ಅವರ ಪತ್ನಿ ಕಮಲ್ (75) ಇವರಿಗೆ ತಲಾ ನಾಲ್ಕು ವರ್ಷ ಮತ್ತು 6 ತಿಂಗಳ ಶಿಕ್ಷೆ ಪ್ರಕಟಿಸಲಾಗಿದೆ. ಅವರ ಮಗ ಅಜಯ್ ಮತ್ತು ಅವರ ಪತ್ನಿ ನಮ್ರತಾಗೆ ತಲಾ 4 ವರ್ಷಗಳ ಅವಧಿ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ. ಸ್ವಿಟ್ಜರ್ಲ್ಯಾಂಡ್ನ ಕಾರ್ಮಿಕ ಕಾನೂನು ಉಲ್ಲಂಘನೆ, ಮಾನವ ಕಳ್ಳಸಾಗಣೆ, ಮನೆಗೆಲಸದವರ ಮೇಲೆ ದೌರ್ಜನ್ಯ ಸೇರಿ ಹಲವು ಪ್ರಕರಣಗಳಲ್ಲಿ ಈ ನಾಲ್ವರನ್ನೂ ದೋಷಿಗಳು ಎಂದು ಪರಿಗಣಿಸಿ ಕೋರ್ಟ್ ತೀರ್ಪು ನೀಡಿ, ಶಿಕ್ಷೆ ವಿಧಿಸಿದೆ.
ಕುಟುಂಬವು ಜಿನೀವಾದಲ್ಲಿ ಹೊಂದಿರುವ ಮಹಲಿನಲ್ಲಿ ಮನೆಯಲ್ಲಿ ಸಾಕಿದ ನಾಯಿಗೆ ವ್ಯಯಿಸುವ ಹಣಕ್ಕಿಂತ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಭಾರತದಿಂದ ಕರೆದುಕೊಂಡು ಹೋದ ಕಾರ್ಮಿಕರಿಗೆ ಕಡಿಮೆ ಸಂಬಳ ನೀಡುವುದು, ಅಗತ್ಯಕ್ಕಿಂತ ಹೆಚ್ಚು ದುಡಿಸುವುದು ಸೇರಿ ಹಲವು ರೀತಿಯಲ್ಲಿ ದೌರ್ಜನ್ಯ ಎಸಗಿ ಶೋಷಣೆ ಮಾಡಿದ ಆರೋಪದಲ್ಲಿ ಈ ಶಿಕ್ಷೆ ಪ್ರಕಟಿಸಲಾಗಿದೆ. ಕೋರ್ಟ್ ನ ತೀರ್ಪನ್ನು ಪ್ರಶ್ನಿಸಿರುವ ಹಿಂದೂಜಾ ಕುಟುಂಬ ಈಗ ಮೇಲ್ಮನವಿ ಸಲ್ಲಿಸಲು ಮುಂದಾಗಿದೆ ಎಂದು ಅವರ ಪರ ವಕೀಲರು ತಿಳಿಸಿದ್ದಾರೆ.