ವಾಷಿಂಗ್ಟನ್, ಜು.02(DaijiworldNews/AA): ಭಾರತೀಯ ಮೂಲದ ಅಮೆರಿಕದ ಉದ್ಯಮಿ, ಔಟ್ಕಮ್ ಹೆಲ್ತ್ ಸಂಸ್ಥೆಯ ಸಹ ಸಂಸ್ಥಾಪಕ ರಿಷಿ ಶಾ ಅವರು ಬರೋಬ್ಬರಿ 8,300 ಕೋಟಿ ರೂ. ವಂಚನೆ ಮಾಡಿದ್ದಾರೆ. ಇದೀಗ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಷಿ ಶಾ ಅವರನ್ನು ಅಮೆರಿಕ ಜಿಲ್ಲಾ ಕೋರ್ಟ್ ದೋಷಿ ಎಂದು ಘೋಷಿಸಿದ್ದು, ಏಳೂವರೆ ವರ್ಷ ಶಿಕ್ಷೆ ವಿಧಿಸಿದೆ.
ಗೋಲ್ಡ್ ಸಚ್ಸ್ ಗ್ರೂಪ್, ಗೂಗಲ್ ಪೇರೆಂಟ್ ಆಲ್ಫಬೆಟ್ ಮತ್ತು ಇಲಿನಾಯ್ಸ್ ಗವರ್ನರ್ ಜೆಬಿ ಪ್ರೈಜಕರ್ ನಂತಹ ಹೂಡಿಕೆದಾರರಿಗೆ ತಮ್ಮ ಸ್ಕೀಂ ಮೂಲಕ ರಿಷಿ ಶಾ 8,300 ಕೋಟಿ ರೂ. ವಂಚನೆ ಮಾಡಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್ ದೋಷಿ ಎಂದು ಘೋಷಿಸಿ, ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಅಮೆರಿಕ ಜಿಲ್ಲಾ ನ್ಯಾಯಾಧೀಶ ಥಾಮನ್ ಡರ್ಕಿನ್ ಅವರು ಪ್ರಕರಣದ ವಾದ-ಪ್ರತಿವಾದಗಳನ್ನು ಆಲಿಸಿ, ಇದು ಅಮೆರಿಕದ ಇತಿಹಾಸದಲ್ಲಿನ ಅತಿದೊಡ್ಡ ಕಾರ್ಪೋರೇಟ್ ಹಗರಣವಾಗಿದೆ ಎಂದು ಹೇಳಿದ್ದಾರೆ. ಇನ್ನು ರಿಷಿ ಶಾ, ಶ್ರದ್ಧಾ ಅಗರ್ವಾಲ್ ಹಾಗೂ ಮುಖ್ಯ ಹಣಕಾಸು ಅಧಿಕಾರಿ ಬ್ರಾಡ್ ಪುರ್ಡೈ ಜತೆಗೂಡಿ ಹೂಡಿಕೆದಾರರಿಗೆ, ಕ್ಲಯಂಟ್ ಗಳಿಗೆ ದೊಡ್ಡ ಪ್ರಮಾಣದಲ್ಲಿ ವಂಚನೆ ಎಸಗಿದ್ದಾರೆ ಎನ್ನಲಾಗಿದೆ.
ಇನ್ನು ಹೂಡಿಕೆದಾರರಿಗೆ ಸುಳ್ಳು ಹೇಳಿ ವಂಚನೆ, ಸುಳ್ಳು ಜಾಹೀರಾತು ಪ್ರಕಟಿಸಿ ವಂಚನೆ ಹೀಗೆ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ರಿಷಿ ಶಾಗೆ 15ವರ್ಷಗಳ ಶಿಕ್ಷೆ ವಿಧಿಸಬೇಕೆಂದು ಕೋರ್ಟ್ಗೆ ಸಂತ್ರಸ್ತರು ಮನವಿ ಕೂಡ ಮಾಡಿದ್ದರು. ಆದರೆ ಕೋರ್ಟ್ ಏಳೂವರೆ ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.