ಲಂಡನ್, ಜು.05(DaijiworldNews/AA): ಬ್ರಿಟನ್ ಸಂಸತ್ ಚುನಾವಣೆಯಲ್ಲಿ ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಕ್ಷ ಗೆಲುವು ಸಾಧಿಸಿದ್ದು, ಹಾಲಿ ಪ್ರಧಾನಿ ರಿಷಿ ಸುನಕ್ ಅವರ ಪಕ್ಷ ಕನ್ಸರ್ವೇಟಿವ್ ಪಕ್ಷ ಹೀನಾಯ ಸೋಲು ಕಂಡಿದೆ. ತಮ್ಮ ಪಕ್ಷಕ್ಕೆ ಸೋಲಾದ ಬೆನ್ನಲ್ಲೇ ಪ್ರಧಾನಿ ರಿಷಿ ಸುನಕ್ ಕ್ಷಮೆ ಯಾಚಿಸಿದ್ದಾರೆ.
ಫಲಿತಾಂಶ ಹೊರ ಬೀಳುತ್ತಿದ್ದಂತೆ ಪಕ್ಷದ ಸೋಲಿಗೆ ಕ್ಷಮೆ ಯಾಚಿಸಿದ ರಿಷಿ ಸುನಕ್ ಅವರು, ಈ ಸೋಲಿನ ಸಂಪೂರ್ಣ ಜವಾಬ್ದಾರಿಯನ್ನು ನಾನು ಹೊತ್ತುಕೊಳ್ಳುತ್ತೇನೆ. ಲೇಬರ್ ಪಕ್ಷವು ಈ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದಿದೆ ಮತ್ತು ಅವರ ವಿಜಯಕ್ಕಾಗಿ ಅಭಿನಂದಿಸಲು ನಾನು ಸರ್ ಕೀರ್ ಸ್ಟಾರ್ಮರ್ಗೆ ಕರೆ ಮಾಡಿದ್ದೇನೆ. ಇಂದು, ಅಧಿಕಾರವು ಶಾಂತಿಯುತವಾಗಿ ಮತ್ತು ಕ್ರಮಬದ್ಧವಾಗಿ ಅಧಿಕಾರ ಹಸ್ತಾಂತರಗೊಂಡಿದೆ. ಎಲ್ಲಾ ಕಡೆಯಿಂದಲೂ ಸದ್ಭಾವನೆ ಇರುತ್ತದೆ. ಇದು ನಮ್ಮ ದೇಶದ ಸ್ಥಿರತೆ ಮತ್ತು ಭವಿಷ್ಯದ ಬಗ್ಗೆ ನಮಗೆಲ್ಲರಿಗೂ ವಿಶ್ವಾಸವನ್ನು ನೀಡುವ ವಿಷಯವಾಗಿದೆ ಎಂದು ಹೇಳಿದರು.
ಬ್ರಿಟನ್ನಲ್ಲಿ ಸಾರ್ವತ್ರಿಕ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಬರೋಬ್ಬರಿ 14 ವರ್ಷಗಳ ಬಳಿಕ ಲೇಬರ್ ಪಕ್ಷ ಮತ್ತೆ ಸರ್ಕಾರ ರಚಿಸಲು ಮುಂದಾಗಿದೆ. ಲೇಬರ್ ಪಕ್ಷವು ಕನ್ಸರ್ವೇಟಿವ್ ಪಕ್ಷವನ್ನು ಸೋಲಿಸಿದ ಬಳಿಕ ರಿಷಿ ಸುನಕ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ಇಂಗ್ಲೆಂಡ್ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲು ಕೀರ್ ಸ್ಟಾರ್ಮರ್ ತಯಾರಾಗಿದ್ದಾರೆ.
ಇನ್ನು ಯುಕೆ ಚುನಾವಣೆಯಲ್ಲಿ ಜಯ ಗಳಿಸಿದ ಕೀರ್ ಸ್ಟಾರ್ಮರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಅಭಿನಂದಿಸಿದ್ದಾರೆ. ಲೇಬರ್ ಪಕ್ಷದ ನಾಯಕ ಕೀರ್ ಸ್ಟಾರ್ಮರ್ ಜೊತೆ ಪಾಸಿಟಿವ್ ಸಹಯೋಗವನ್ನು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ. ಹಾಗೇ, ಎಕ್ಸ್ ನಲ್ಲಿ ಅವರು ರಿಷಿ ಸುನಕ್ ಅವರ ನಾಯಕತ್ವಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದು, ಅವರು ನೀಡಿದ ಕೊಡುಗೆಗಳಿಗಾಗಿ ಧನ್ಯವಾದ ತಿಳಿಸಿದ್ದಾರೆ.