ವಾಷಿಂಗ್ಟನ್, ಜು 15(DaijiworldNews/ AK): ಶೂಟೌಟ್ ನಡೆದ ಎರಡು ದಿನದ ಬಳಿಕ ಮೊದಲ ಬಾರಿಗೆ ಡೊನಾಲ್ಡ್ ಟ್ರಂಪ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಸೋಮವಾರ ಮಿಲ್ವಾಕಿಯಲ್ಲಿ ನಡೆದ ರಿಪಬ್ಲಿಕನ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಟ್ರಂಪ್ ಭಾಗವಹಿಸಿದರು.
ಗುಂಡೇಟಿನಿಂದ ಬಲ ಕಿವಿಗೆ ಗಾಯವಾಗಿದ್ದು ಬ್ಯಾಂಡೇಜ್ ಹಾಕಲಾಗಿದೆ. ಟ್ರಂಪ್ ಬರುತ್ತಿದ್ದಂತೆ ರಿಪಬ್ಲಿಕನ್ ಪಕ್ಷದ ಕಾರ್ಯಕರ್ತರು ಭರ್ಜರಿ ಸ್ವಾಗತ ನೀಡಿದರು.ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಡೊನಾಲ್ಡ್ ಟ್ರಂಪ್ ಅವರನ್ನು ಆಯ್ಕೆ ಮಾಡಲಾಯಿತು. ರಿಪಬ್ಲಿಕನ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಈ ನಿರ್ಧಾರವನ್ನು ಘೋಷಿಸಲಾಯಿತು.
2016 ರ ಚುನಾವಣೆಯಲ್ಲಿ ಟ್ರಂಪ್ ಅವರು ಹಿಲರಿ ಕ್ಲಿಂಟನ್ ಅವರನ್ನು ಸೋಲಿಸಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು. ಆದರೆ 2020ರ ಚುನಾವಣೆಯಲ್ಲಿ ಜೋ ಬೈಡನ್ ಮುಂದೆ ಟ್ರಂಪ್ ಸೋತಿದ್ದರು. ಈಗ ಎರಡನೇ ಬಾರಿ ಜೋ ಬೈಡನ್ ಅವರನ್ನು 78 ವರ್ಷದ ಟ್ರಂಪ್ ಎದುರಿಸಲಿದ್ದಾರೆ.
ರಿಪಬ್ಲಿಕನ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಜೆಡಿ ವ್ಯಾನ್ಸ್ ಅವರನ್ನು ಡೊನಾಲ್ಡ್ ಟ್ರಂಪ್ ಅಧಿಕೃತವಾಗಿ ಘೋಷಿಸಿದ್ದಾರೆ. ಜೆಡಿ ವ್ಯಾನ್ಸ್ ಅವರ ಪತ್ನಿ ಉಷಾ ಚಿಲುಕುರಿ ವ್ಯಾನ್ಸ್, ಭಾರತೀಯ ಸಂಜಾತೆಯಾಗಿದ್ದಾರೆ.
ಡೊನಾಲ್ಡ್ ಟ್ರಂಪ್ ಪೆನ್ಸಿಲ್ವೇನಿಯಾ ರಾಜ್ಯದ ಬಟ್ಲರ್ ಟೌನ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹಿರಂಗ ಪ್ರಚಾರ ನಡೆಸುತ್ತಿದ್ದರು. ಈ ವೇಳೆ ಥಾಮಸ್ ಕ್ರುಕ್ಸ್ ಗುಂಡು ಹಾರಿಸಿದ್ದ. ಅದೃಷ್ಟವಶಾತ್ ಗುಂಡು ಟ್ರಂಪ್ ಬಲ ಕಿವಿಯನ್ನು ಸೀಳಿ, ಕಾರ್ಯಕರ್ತನ ಎದೆಗೆ ನುಗ್ಗಿದೆ. ತಕ್ಷಣವೇ ಟ್ರಂಪ್ ಕೆಳಗೆ ಕೂತು ತಪ್ಪಿಸಿಕೊಂಡಿದ್ದಾರೆ.ಕ್ಷಣದಲ್ಲೇ ಭದ್ರತಾ ಪಡೆಗಳು ಟ್ರಂಪ್ ಸುತ್ತುವರಿದು ರಕ್ಷಣೆ ನೀಡಿವೆ. ಕ್ಷಣಾರ್ಧದಲ್ಲೇ ಅಣತಿ ದೂರದ ಉತ್ಪಾದನಾ ಘಟಕದ ಛಾವಣಿಯ ಮೇಲೆ ಕೂತು ಗುಂಡು ಹಾರಿಸಿದ ಹಂತಕನನ್ನು ಅಮೆರಿಕ ಸ್ನಿಪ್ಪರ್ಗಳು ಹೊಡೆದುರುಳಿಸಿವೆ. ಹಂತಕನನ್ನು ಬೆಥೆಲ್ ಪಾರ್ಕ್ನ 20 ವರ್ಷದ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂದು ಎಫ್ಬಿಐ ಗುರುತಿಸಿದೆ.