ಢಾಕಾ, ಜು. 20(DaijiworldNews/AA): ಬಾಂಗ್ಲಾದೇಶದಲ್ಲಿ ಉದ್ಯೋಗ ಮೀಸಲಾತಿ ವಿಚಾರವಾಗಿ ಭುಗಿಲೆದ್ದಿರುವ ಹಿಂಸಾಚಾರ ದಿನೇ ದಿನೇ ತೀವ್ರ ಸ್ವರೂಪ ಪಡೆಯುತ್ತಿದೆ. ಇದೀಗ ಪ್ರತಿಭಟನಾಕಾರರು ಏಕಾಏಕಿ ಜೈಲಿಗೆ ನುಗ್ಗಿದ ಪರಿಣಾಮ ನೂರಾರು ಕೈದಿಗಳು ತಪ್ಪಿಸಿಕೊಂಡು ಓಡಿಹೋಗಿದ್ದಾರೆ. ಬಳಿಕ ಪ್ರತಿಭಟನಾಕಾರರು ಜೈಲಿಗೆ ಬೆಂಕಿ ಹಚ್ಚಿದ್ದಾರೆ.
ನರ್ಸಿಂಗಡಿ ಜಿಲ್ಲೆಯಲ್ಲಿ ಜೈಲಿನೆದುರು ಪ್ರತಿಭಟನೆ ಮಾಡುತ್ತಿದ್ದವರು ಏಕಾಏಕಿ ಉದ್ರಿಕ್ತರಾಗಿ ಜೈಲಿನೊಳಗೆ ನುಗ್ಗಿದ್ದಾರೆ. ಇದರಿಂದಾಗಿ ನೂರಾರು ಕೈದಿಗಳು ಸುಲಭವಾಗಿ ತಪ್ಪಿಸಿಕೊಂಡು ಹೋಗಿದ್ದಾರೆ. ಬಳಿಕ ಪ್ರತಿಭಟನಾಕಾರರು ಜೈಲಿಗೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇನ್ನು ದೇಶಾದ್ಯಂತ ಭುಗಿಲೆದ್ದಿರುವ ಹಿಂಸಾಚಾರದಿಂದಾಗಿ ಇದುವರೆಗೂ 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ. ಪ್ರತಿಭಟನಾಕಾರರು ರಾಷ್ಟ್ರವ್ಯಾಪಿ ಬಂದ್ ಗೆ ಕರೆ ನೀಡಿದ್ದಾರೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ದೇಶದಲ್ಲಿ ಮೊಬೈಲ್ ಇಂಟರ್ನೆಟ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಪ್ರತಿಭಟನಾಕಾರರು ಬಂಗ್ಲಾದ ರಾಜಧಾನಿ ಢಾಕಾದಲ್ಲಿನ ರಾಜ್ಯ ಸರ್ಕಾರ ಸುದ್ದಿವಾಹಿನಿಗೆ ಬೆಂಕಿ ಹಚ್ಚಿದ್ದರು. ಸುದ್ದಿವಾಹಿನಿಗೆ ಬೆಂಕಿ ಹಚ್ಚುವ ಒಂದು ದಿನ ಮೊದಲು, ಸರ್ಕಾರಿ ಟಿವಿ ಕಚೇರಿಯಲ್ಲಿ ಪ್ರಧಾನಿ ಶೇಖ್ ಹಸೀನಾ ಅವರ ಸಂದರ್ಶನ ನಡೆದಿತ್ತು. ಈ ಸಂದರ್ಶನದಲ್ಲಿ ಅವರು, ಪ್ರತಿಭಟನಾಕಾರರು ಮೀಸಲಾತಿಯನ್ನು ಕೊನೆಗೊಳಿಸಬೇಕೆಂಬ ತಮ್ಮ ಬೇಡಿಕೆಗೆ ಅಚಲರಾಗಿದ್ದಾರೆ. ಹಿಂಸಾಚಾರದ ಹಿನ್ನೆಲೆಯಲ್ಲಿ ದೇಶದ ಎಲ್ಲಾ ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳನ್ನು ಅನಿರ್ದಿಷ್ಟಾವಧಿಯವರೆಗೆ ಮುಚ್ಚಬೇಕು. ಜೊತೆಗೆ ಪರಿಸ್ಥಿತಿ ನಿಯಂತ್ರಿಸಲು ಬಿಗಿ ಬಂದೋಬಸ್ತ್ ಮಾಡುವಂತೆ ಸೂಚಿಸಿದ್ದರು.
ಇದರಿಂದಾಗಿ ಪ್ರತಿಭಟನಾಕಾರರು ಸರ್ಕಾರಿ ಸುದ್ದಿವಾಹಿನಿಯ ಪ್ರಧಾನ ಕಚೇರಿಗೆ ಬೆಂಕಿ ಹಚ್ಚಿದ್ದರು. ಹಾಗೂ ಪ್ರಧಾನ ಕಚೇರಿಯಲ್ಲಿ ನಿಲ್ಲಿಸಿದ್ದ ಹಲವಾರು ವಾಹನಗಳನ್ನು ಕೂಡ ನಾಶಪಡಿಸಿದ್ದಾರೆ.