ನ್ಯೂಯಾರ್ಕ್, ಜು 22 (DaijiworldNews/MS): ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು 2024ರ ಅಧ್ಯಕ್ಷೀಯ ಚುನಾವಣಾ ಸ್ಪರ್ಧೆಯಿಂದ ದಿಢೀರ್ ಹಿಂದೆ ಸರಿಯುವುದಾಗಿ ಭಾನುವಾರ ಘೋಷಣೆ ಮಾಡಿದ್ದಾರೆ. ಇದರೊಂದಿಗೆ ಅಮೆರಿಕ ಉಪಾಧ್ಯಕ್ಷರಾಗಿರುವ ಕಮಲಾ ಹ್ಯಾರಿಸ್ ದಾರಿ ಸುಗಮವಾಗಿದೆ.
ಈ ವರ್ಷ ನವೆಂಬರ್ ತಿಂಗಳಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರನ್ನು ಎದುರಿಸಲು ಪಕ್ಷದ ಅಭ್ಯರ್ಥಿಯಾಗಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಹೆಸರನ್ನು ಬೈಡೆನ್ ಅನುಮೋದಿಸಿದರು.
ಡೆಲವೇರ್ನಲ್ಲಿರುವ ತಮ್ಮ ಬೀಚ್ ಹೌಸ್ನಲ್ಲಿ ಕೋವಿಡ್ನಿಂದ ಚೇತರಿಸಿಕೊಳ್ಳುತ್ತಿರುವಂತೆಯೇ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪತ್ರವೊಂದನ್ನು ಫೋಸ್ಟ್ ಮಾಡಿರುವ 81 ವರ್ಷದ ಡೆಮಾಕ್ರಟಿಕ್ ಪಕ್ಷದ ಬೈಡನ್, "ಅಧ್ಯಕ್ಷರಾಗಿ ನಿಮಗೆ ಸೇವೆ ಸಲ್ಲಿಸುವುದು ನನ್ನ ಜೀವನದ ದೊಡ್ಡ ಗೌರವವಾಗಿದೆ ಎಂದಿದ್ದಾರೆ. ಮರು ಚುನಾವಣೆಯನ್ನು ಬಯಸುವುದು ನನ್ನ ಉದ್ದೇಶವಾಗಿದ್ದರೂ, ನನ್ನ ಪಕ್ಷ ಮತ್ತು ದೇಶದ ಹಿತದೃಷ್ಟಿಯಿಂದ ನನ್ನ ಉಳಿದ ಅವಧಿಗೆ ಅಧ್ಯಕ್ಷನಾಗಿ ನನ್ನ ಕರ್ತವ್ಯಗಳನ್ನು ಪೂರೈಸುವುದರ ಮೇಲೆ ಗಮನ ಹರಿಸುವುದು ಉತ್ತಮವಾಗಿದೆ" ಎಂದು ಭಾವಿಸುತ್ತೇನೆ ಎಂದಿದ್ದಾರೆ.
ರಿಪಬ್ಲಿಕನ್ ಅಭ್ಯರ್ಥಿಯಾಗಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪರ್ಧೆ ಖಚಿತವಾಗಿದ್ದು, ಅವರಿಗೆ ಪ್ರಬಲ ಪ್ರತಿಸ್ಪರ್ಧಿಯ ಅವಶ್ಯಕತೆ ಡೆಮಾಕ್ರಟ್ಸ್ ಅನ್ನು ಕಾಡಿತ್ತು. ಇತ್ತೀಚೆಗೆ ಟ್ರಂಪ್ ಅವರ ಮೇಲೆ ದಾಳಿ ನಡೆದು, ಅದರ ಅನುಕಂಪವೂ ಅವರ ಪರವಾಗಿರುವ ಕಾರಣ ರಾಜಕೀಯ ಜಿದ್ದಾಜಿದ್ದಿ ಕುತೂಹಲವನ್ನು ಹೆಚ್ಚಿಸಿದೆ.
ಜೋ ಬೈಡೆನ್ ಅವರು ಈ ಪೋಸ್ಟ್ನಲ್ಲಿ ಉಪಾಧ್ಯಕ್ಷರಾದ ಕಮಲಾ ಹ್ಯಾರಿಸ್ ಅವರ ಜೊತೆಗಿನ ಫೋಟೋ ಶೇರ್ ಮಾಡಿದ್ದು, ಅವರನ್ನೇ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಅನುಮೋದಿಸುತ್ತಿರುವುದಾಗಿ ಘೋಷಿಸಿದ್ದಾರೆ. ಈ ನಿರ್ಧಾರವನ್ನು ಪ್ರಕಟಿಸಿದಾಗ ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರ ಜೊತೆಗಿದ್ದರು.