ವಾಷಿಂಗ್ಟನ್, ಆ.03(DaijiworldNews/AA): ಅಮೇರಿಕಾ ಅಧ್ಯಕ್ಷ ಸ್ಥಾನಕ್ಕೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಉಪಾಧ್ಯಕ್ಷೆ, ಭಾರತದ ಮೂಲದ ಕಮಲಾ ಹ್ಯಾರಿಸ್ ಅವರ ಹೆಸರು ಅಂತಿಮವಾಗಿದೆ ಎಂದು ವರದಿಯಾಗಿದೆ.
ಆಗಸ್ಟ್ ತಿಂಗಳ ಕೊನೆಯಲ್ಲಿ ಚಿಕಾಗೋದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗುವುದು ಎಂದು ಡೆಮಾಕ್ರಟಿಕ್ ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಕಮಲಾ ಹ್ಯಾರಿಸ್ ಅವರು, 'ಅಮೇರಿಕಾದ ಅಧ್ಯಕ್ಷ ಸ್ಥಾನಕ್ಕೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಲು ನನಗೆ ಹೆಮ್ಮೆ ಇದೆ' ಎಂದು ಹರ್ಷ ವ್ಯಕ್ತಪಡಿಸಿದ್ದರು.
ಕೆಲ ದಿನಗಳ ಹಿಂದೆ ಅಮೇರಿಕಾ ಅಧ್ಯಕ್ಷ, ಡೆಮಾಕ್ರಟಿಕ್ ಪಕ್ಷದ ಜೋ ಬೈಡೆನ್ ಅವರು ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಇದು ಅಮೇರಿಕಾ ಮಾತ್ರವಲ್ಲ, ಜಗತ್ತಿನಾದ್ಯಂತ ಸಂಚಲನ ಮೂಡಿಸಿತ್ತು. ಬಳಿಕ ಇದೀಗ ಅಮೇರಿಕಾ ಅಧ್ಯಕ್ಷ ಸ್ಥಾನಕ್ಕೆ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ವಿರುದ್ಧ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್ ಅವರು ಆಯ್ಕೆಯಾಗಿದ್ದಾರೆ.
ಅಮೇರಿಕಾ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿಯುವ ಕುರಿತು ಜೋ ಬೈಡೆನ್ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಘೋಷಿಸಿದ್ದರು. 'ನಾನು ಕಳೆದ ಮೂರುವರೆ ವರ್ಷಗಳಿಂದ ಅಮೆರಿಕ ಅಧ್ಯಕ್ಷನಾಗಿ, ದೇಶದ ಏಳಿಗೆಗೆ ದುಡಿದಿದ್ದೇನೆ. ನಿಮ್ಮೆಲ್ಲರ ಅಧ್ಯಕ್ಷನಾಗಿ ಸೇವೆ ಮಾಡಿದ್ದು ನನಗೆ ಖುಷಿಯಾಗಿದೆ. ಎರಡನೇ ಬಾರಿ ಆಯ್ಕೆಗೂ ನಾನು ಮನಸ್ಸು ಮಾಡಿದ್ದೆ. ಆದರೆ ದೇಶ ಹಾಗೂ ಪಕ್ಷದ ಹಿತದೃಷ್ಟಿಯಿಂದಾಗಿ ನಾನು ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದಿದ್ದೇನೆ' ಎಂದು ಬರೆದುಕೊಂಡಿದ್ದರು.