ಢಾಕಾ, ಆ.14(DaijiworldNews/AA): ಬಾಂಗ್ಲಾದೇಶದಲ್ಲಿ ರಚನೆಯಾಗಿರುವ ಮಧ್ಯಂತರ ಸರ್ಕಾರದ ವಿರೋಧ ಮಧ್ಯೆಯೂ, ಆಗಸ್ಟ್ 15 ರಂದು 'ರಾಷ್ಟ್ರೀಯ ಶೋಕ ದಿನ' ಆಚರಣೆ ಮಾಡುವಂತೆ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಬಾಂಗ್ಲಾದ ಜನರಿಗೆ ಕರೆ ನೀಡಿದ್ದಾರೆ.
ಪ್ರತಿಯೊಬ್ಬರೂ ಆಗಸ್ಟ್ 15ರಂದು ಶ್ರದ್ಧಾ ಪೂರ್ವಕವಾಗಿ ಹಾಗೂ ಗೌರವದಿಂದ ರಾಷ್ಟ್ರೀಯ ಶೋಕ ದಿನನ್ನಾಗಿ ಆಚರಿಸಬೇಕು ಎಂದು ಮನವಿ ಮಾಡುತ್ತೇನೆ' ಎಂದು ಹಸೀನಾ ಹೇಳಿರುವುದಾಗಿ ಅವರ ಮಗ ಸಜೀದ್ ವಾಜೆದ್ ಜಾಯ್ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಶೇಖ್ ಹಸೀನಾ ಅವರು ತಮ್ಮ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬಾಂಗ್ಲಾದಲ್ಲಿ ಮಧ್ಯಂತರ ಸರ್ಕಾರ ರಚನೆಯಾಗಿದ್ದು, ಈ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್ ಅವರು 'ರಾಷ್ಟ್ರೀಯ ಶೋಕ ದಿನ'ದಂದು ಸಾರ್ವಜನಿಕ ರಜೆ ರದ್ದು ಮಾಡಿದ್ದಾರೆ.
ಇನ್ನು ಬಾಂಗ್ಲಾದಲ್ಲಿ ರಚನೆಯಾಗಿರುವ ಮಧ್ಯಂತರ ಸರ್ಕಾರದ ವಿರುದ್ಧ ಶೇಖ್ ಹಸೀನಾ ಕಿಡಿಕಾರಿದ್ದು, ಮೀಸಲಾತಿ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಹೆಸರಿನಲ್ಲಿ ಗಲಭೆ ಸೃಷ್ಟಿಸಿದವರು, ದೇಶದಾದ್ಯಂತ ಬೆಂಕಿ ಹಚ್ಚಿದವರು ಹಾಗೂ ಕೊಲೆಗಳು ನಡೆಯಲು ಕಾರಣರಾದವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ತಿಳಿಸಿದ್ದಾರೆ.
1971ರಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯ ಚಳುವಳಿಯ ಮುಂದಾಳತ್ವ ವಹಿಸಿದ್ದ ರಹಮಾನ್ ಅವರ ಹತ್ಯೆಯ ಸ್ಮರಣಾರ್ಥ ಬಾಂಗ್ಲಾದೇಶದಲ್ಲಿ ಆಗಸ್ಟ್ 15 ಅನ್ನು 'ರಾಷ್ಟ್ರೀಯ ಶೋಕ ದಿನ'ವಾಗಿ ಆಚರಣೆ ಮಾಡಲಾಗುತ್ತದೆ. ಅವರು ಹತ್ಯೆಯಾದ ನಿವಾಸವನ್ನು 'ಬಂಗಬಂಧು ಮ್ಯೂಸಿಯಂ' ಆಗಿ ರೂಪಿಸಲಾಗಿತ್ತು. ಆದರೆ ಇದೇ ಆಗಸ್ಟ್ 5ರಂದು ಪ್ರತಿಭಟನಾಕಾರರು 'ಬಂಗಬಂಧು ಮ್ಯೂಸಿಯಂ' ಅನ್ನು ಧ್ವಂಸಗೊಳಿಸಿದ್ದರು.