ಲಂಡನ್,ಮೇ 24(Daijiworld News/MSP): ಭರತ ಖಂಡ ಗೆದ್ದ ನರೇಂದ್ರ ಮೋದಿಯ ವಿಜಯದ ಖುಷಿಯನ್ನು ಅನಿವಾಸಿ ಭಾರತೀಯರು ಲಂಡನ್ ನ ಬೀದಿಗಳಲ್ಲಿ ವಿಜೃಂಭನೆಯಿಂದ ಆಚರಿಸಿದರು. ಲಂಡನ್ ನ ಬೀದಿ ಬದಿಯಲ್ಲಿ ಕುಣಿದು ಕುಪ್ಪಳಿಸಿದ ಭಾರತೀಯರು ಗುಂಪು ಗುಂಪಾಗಿ ಹಾಡಿಗೆ ನೃತ್ಯ ಮಾಡಿ ಗೆಲುವನ್ನು ಸಂಭ್ರಮಿಸಿದರು.
ಲಂಡನ್ ನ ಪಿಕಡೆಲ್ಲಿ ಸರ್ಕಸ್, ಹಾಗೂ ಕಿಂಗ್ಸ್ ಬರ್ರಿ ಪ್ರದೇಶದಲ್ಲಿ ಜಮಾಯಿಸಿದ್ದ ನೂರಾರು ಮಂದಿ ಗರ್ಭಾ ನೃತ್ಯ ಮಾಡಿ ವಿಜಯೋತ್ಸವ ಆಚರಿಸಿದರು.
57 ದೇಶಗಳಿಗೆ 97 ಪ್ರವಾಸಗಳನ್ನು ಕೈಗೊಂಡ ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಜಗತ್ತಿನಲ್ಲಿ ಭಾರತದ ಬಗೆಗಿನ ಬ್ರ್ಯಾಂಡ್ ಬದಲಾಗಿರುವುದು ನಿಜ. ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭ ನಡೆದ ಗೋದ್ರಾ ಗಲಭೆ ಸಂಬಂಧದ ಆರೋಪದಲ್ಲಿ ಅಮೆರಿಕ ಮೋದಿಗೆ ವೀಸಾ ತಿರಸ್ಕರಿಸಿತ್ತು. ಆದರೆ ಪ್ರಧಾನಿಯಾದ ಬಳಿಕ ಆದೇ ಅಮೇರಿಕಾ ಪ್ರವಾಸ ಮಾಡಿ ಆಗಿನ ಅಧ್ಯಕ್ಷ ಬರಾಕ್ ಒಬಾಮಾರನ್ನು ಭೇಟಿಯಾಗಿ ಭಾರತದ ಕಡೆ ಸೆಳೆಯುವಂತೆ ಮಾಡಿದ ಕೀರ್ತಿ ಮೋದಿಯವರದ್ದಾಗಿತ್ತು. ಒಟ್ಟಾರೆ ಭಾರತೀಯರೊಂದಿಗೆ ಅನಿವಾಸಿ ಭಾರತೀಯರ ಮನದಲ್ಲೂ ಮೋದಿ ಲಗ್ಗೆ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.