ಕುಂದಾಪುರ:, ಆ.16(DaijiworldNews/AA): ಶ್ರೀ ಮೂಕಾಂಬಿಕಾ ಮಹಿಳಾ ಮಂಡಳಿಗಳ ತಾಲೂಕು ಒಕ್ಕೂಟ (ರಿ.) ಕುಂದಾಪುರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕುಂದಾಪುರ, ರೋಟರಿ ಮಿಡ್ ಟೌನ್ ಕುಂದಾಪುರ ಜಂಟಿ ಆಶ್ರಯದಲ್ಲಿ ವರಮಹಾಲಕ್ಷ್ಮೀ ಪೂಜೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಶ್ರೀ ಮೂಕಾಂಬಿಕಾ ಮಹಿಳಾ ಮಂಡಳಿಗಳ ತಾಲೂಕು ಒಕ್ಕೂಟ ಸಭಾಭವನದಲ್ಲಿ ನಡೆಯಿತು.










ಸನ್ಮಾನ ನೆರವೇರಿಸಿ ಮಾತನಾಡಿದ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಹಿಳೆಯರಿಗೆ ಸಮಸ್ಯೆಯಾದ ತಕ್ಷಣ ಅಲ್ಲಿಗೆ ಧಾವಿಸಿ, ಅವರ ಧ್ವನಿಯಾಗುವ ರಾಧಾದಾಸ್ ಅವರ ಸಮಾಜಸೇವೆ ಶ್ಲಾಘನಾರ್ಹವಾದುದು. ವರಮಹಾಲಕ್ಷ್ಮೀ ಪೂಜೆಯ ಜೊತೆಯಲ್ಲಿ ಸಮಾಜದ ವಿವಿಧ ಸ್ತರದಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸುವ ಕಾರ್ಯ ಅರ್ಥಪೂರ್ಣ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಖ್ಯಾತ ವಕೀಲ ರವಿಕಿರಣ್ ಮುರ್ಡೇಶ್ವರ ಮಾತನಾಡಿ ವರಮಹಾಲಕ್ಷ್ಮೀ ಪೂಜೆಯನ್ನು ವರ್ಷದಿಂದ ವರ್ಷಕ್ಕೆ ಭಕ್ತಿ, ಶ್ರದ್ದೆಯಿಂದ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಇಂಥಹ ಸಾಮೂಹಿಕ ಆಚರಣೆಗಳು ಹೆಚ್ಚು ಪ್ರಸ್ತುತವಾಗುತ್ತದೆ. ಜೊತೆಯಲ್ಲಿ ಈ ಕಾರ್ಯಕ್ರಮದಲ್ಲಿ ನ್ಯಾಯವಾದಿ, ಪತ್ರಕರ್ತ, ಸಾಹಿತಿ ಎ,ಎಸ್ ಎನ್ ಹೆಬ್ಬಾರ್ ಅವರನ್ನು ಸನ್ಮಾನಿಸುತ್ತಿರುವುದು ಕೂಡಾ ಅಷ್ಟೇ ಮಹತ್ವದ್ದಾಗಿದೆ. ಹೆಬ್ಬಾರರು ತರ್ಕಸಹಿತ ವಾದಕ್ಕೆ ಎಷ್ಟು ಪ್ರಸಿದ್ಧಿ ಪಡೆದಿದ್ದರೋ ಸಾಹಿತ್ಯ ಕೃಷಿಯಲ್ಲೂ ಹೆಸರು ಮಾಡಿದ್ದರು. ಭಾಷೆಯನ್ನು ಬಳಸಿ, ಉಪಯೋಗಿಸಿ ತನ್ನ ಸ್ವಗೃಹಕ್ಕೂ ಕೂಡಾ ನುಡಿ ಎಂದು ಹೆಸರಿಟ್ಟ ಕನ್ನಡದ ಸಾಹಿತಿ ಇವರು. ಪತ್ರಿಕೋಧ್ಯಮದಲ್ಲಿ ಇವರು ಸಲ್ಲಿಸಿದ ಸೇವೆ, ಅಲ್ಲಿಯೂ ಕೂಡಾ ಸಾಹಿತ್ಯವನ್ನು ಅದ್ಭುತವಾಗಿ ಬಳಕೆ ಮಾಡಿ ಇಂದಿಗೂ ಕೂಡಾ ಅವರ ವರದಿಗಳು ನೆನಪಿನಲ್ಲಿ ಉಳಿದುಕೊಂಡಿವೆ ಎಂದರು.
ಈ ಸಂದರ್ಭದಲ್ಲಿ ಸಾಧಕರಾದ ಕುಂದಾಪುರ ಹಿರಿಯ ವಕೀಲರು ಎ.ಎಸ್.ಎನ್.ಹೆಬ್ಬಾರ್, ರೋಟರಿ ಕ್ಲಬ್ ಮಾಜಿ ಅಸಿಸ್ಟೆಂಟ್ ಗವರ್ನರ್ ಸುಧಾಕರ್ ಶೆಟ್ಟಿ ಅವರ್ಸೆ, ತೆಕ್ಕಟ್ಟೆ ಗ್ರಾ.ಪಂ.ನ ಎಸ್.ಎಲ್.ಆರ್.ಎಮ್.ಘಟಕದ ಮೇಲ್ವಿಚಾರಕಿ ಹಾಗೂ ವಾಹನ ಚಾಲಕಿ ರೇವತಿ ತೆಕ್ಕಟ್ಟೆ, ರಾಜ್ಯ ಪ್ರಶಸ್ತಿ ವಿಜೇತ ಅಂಗನವಾಡಿ ಕಾರ್ಯಕರ್ತೆ ಅರ್ಚನಾ ಇವರನ್ನು ಸನ್ಮಾನಿಸಲಾಯಿತು.
ಕುಂದಾಪುರ ಶ್ರೀ ಮೂಕಾಂಬಿಕಾ ಮಹಿಳಾ ಮಂಡಳಿಗಳ ತಾಲೂಕು ಒಕ್ಕೂಟದ ಅಧ್ಯಕ್ಷೆ ರಾಧಾದಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕುಂದಾಪುರ ಸಿ.ಡಿ.ಪಿ.ಓ. ಉಮೇಶ್, ಕುಂದಾಪುರ ಶಿಕ್ಷಣಾಧಿಕಾರಿ ಶೋಭಾ ಎಸ್.ಶೆಟ್ಟಿ, ಕುಂದಾಪುರ ರೋಟರಿ ಮಿಡ್ ಟೌನ್ ಅಧ್ಯಕ್ಷ ಶೇಖರ್ ಎನ್. ಶೆಟ್ಟಿ, ಸಮಾಜ ಸೇವಕ ಸುಬ್ಬಣ್ಣ ಶೆಟ್ಟಿ ಮಾರ್ಕೊಡು, ಕುಂದಾಪುರ ರಾಯರ ಹಿಂದೂ ಶಾಲೆ ನಿವೃತ್ತ ಮುಖ್ಯ ಶಿಕ್ಷಕಿ ಶಶಿಕಲಾ ಬಿಜೂರು, ಕುಂಭಾಶಿ ಪಿಡಿಓ ಜಯರಾಮ್ ಶೆಟ್ಟಿ, ಅಂಗನವಾಡಿ ಯೂನಿಯನ್ ಜಿಲ್ಲಾಧ್ಯಕ್ಷೆ ಫಿಲೋಮಿನಾ, ಸ್ತ್ರೀಶಕ್ತಿ ಸಂಘದ ಜಿಲ್ಲಾ ಕಾರ್ಯದರ್ಶಿ ಪ್ರೇಮಾ ಉಪಸ್ಥಿತರಿದ್ದರು.
ರಾಧಾದಾಸ್ ಸ್ವಾಗತಿಸಿದರು. ಕುಂದಾಪುರ ರೂರಲ್ ಆರ್ಯುವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಎಸ್.ಜಿ.ಪ್ರಸನ್ನ ಐತಾಳ್ ವಂದಿಸಿದರು.