ಉಡುಪಿ, ಆ.17(DaijiworldNews/AA): ಮುಡಾ ಹಗರಣದ ತನಿಖೆ ಪೂರ್ಣ ಗೊಳ್ಳುವ ತನಕ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಇರಬಾರದು. ಅವರು ತಕ್ಷಣ ನೈತಿಕ ಹೊಣೆ ಹೊತ್ತು ಸಿಎಂ ಸ್ಥಾನಕ್ಕೆ ರಾಜೀನಾಮೆ ನಿಡಬೇಕು ಎಂದು ಶಾಸಕ ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ.

ಮುಡಾ ಹಗರಣದಲ್ಲಿ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಶನ್ ಗೆ ಅನುಮತಿ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ವಿರುದ್ದ ಕಾಂಗ್ರೆಸ್ ನಾಯಕರು ಟೀಕೆ ಮಾಡುತ್ತಿದ್ದಾರೆ. ತಮಗೆ ಬೇಕಾದಾಗ ರಾಜ್ಯಪಾಲರು ಒಳ್ಳೆಯವರು. ರಾಜ್ಯಪಾಲರ ಭಾಷಣದಲ್ಲಿ ಕೇಂದ್ರ ಸರ್ಕಾರದ ವಿರುದ್ದ ಟೀಕೆ ಮಾಡಿಸಿದ್ದರು. ಮುಡಾ ಹಗರಣಕ್ಕೆ ಸಂಬಂಧಿಸಿ ಮೂರು ಜನ ಖಾಸಗಿ ವ್ಯಕ್ತಿಗಳು ದೂರು ನೀಡಿದ್ದಾರೆ. ರಾಜ್ಯಪಾಲರಿಗೆ ಬಿಜೆಪಿ ದೂರು ನೀಡಿಲ್ಲ. ರಾಜ್ಯಪಾಲರು ವಿವರಣೆ ಕೂಡಾ ಕೇಳಿದ್ದರೂ, ಅದನ್ನು ರಾಜ್ಯ ಸರ್ಕಾರ ನಿಡಿಲ್ಲ. ರಾಜ್ಯ ಸರ್ಕಾರ ಮತ್ತು ಸಿದ್ದರಾಮಯ್ಯ ಭಂಡತನದಿಂದ ವರ್ತಿಸುತ್ತಿದ್ದಾರೆ ಎಂದು ಹೇಳಿದರು.
ಕರ್ನಾಟಕ ರಾಜಕೀಯಕ್ಕೆ ಗೌರವದ ಪರಂಪರೆ ಇದೆ. ಸಿದ್ದರಾಮಯ್ಯ ತನಿಖೆಯನ್ನು ಎದುರಿಸಬೇಕು. ಒಂದು ಕ್ಷಣ ಕೂಡಾ ಸಿಎಂ ಸ್ಥಾನದಲ್ಲಿ ಇರಬಾರದು. ಆರೋಪದಿಂದ ಮುಕ್ತರಾಗುವ ತನಕ ಆ ಚೇರ್ನಲ್ಲಿ ಇರಬಾರದು. ಕಾಂಗ್ರೆಸ್ ಬಂಢತನದಲ್ಲಿ ರಾಜ್ಯಪಾಲರ ನಿರ್ಧಾರವನ್ನು ಪ್ರಶ್ನೆ ಮಾಡುತ್ತಿದೆ. ಆರೋಪ ಸಾಬೀತಾಗದೇ ನಿರಪರಾಧಿ ಆದರೆ ಹೈಕಮಾಂಡ್ ಅನುಮತಿ ಪಡೆದು ನೀವೆ ಮುಖ್ಯಮಂತ್ರಿ ಆಗಿ. ಮುಂದೆ ನ್ಯಾಯಾಲಯವನ್ನು ಕೂಡಾ ಪ್ರಶ್ನೇ ಮಾಡಿದರೆ ಆಶ್ಚರ್ಯ ಇಲ್ಲ. ನಾಳೆ ಒಳಗೆ ರಾಜೀನಾಮೆ ನೀಡದಿದ್ದಲ್ಲಿ ಬಿಜೆಪಿ ತೀವ್ರ ಪ್ರತಿಭಟನೆ ಮಾಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯಪಾಲರು ಪ್ರಾಸಿಕ್ಯೂಶನ್ಗೆ ಅನುಮತಿ ನೀಡಿರುವುದು ಪ್ರಥಮ ಅಲ್ಲ. ಸಿದ್ದರಾಮಯ್ಯ ತಮ್ಮ ವಿರುದ್ದ ಆರೋಪ ಬಂದಾಗ ಲೋಕಾಯುಕ್ತ ತೆಗೆದು ಎಸಿಬಿ ರಚನೆ ಮಾಡಿದ್ದರು. ಸೋಮವಾರ ನಂತರ ಬಿಜೆಪಿ ಪ್ರತಿಭಟನೆ ಮಾಡಲಿದೆ. ರಾಜ್ಯಪಾಲರನ್ನು ಅನಾವಶ್ಯಕ ಟೀಕೆ ಮಾಡಬೇಡಿ. ಜನ ರಸ್ತೆಗೆ ಇಳಿಯುವದಕ್ಕಿಂತ ಮುಂಚೆ ರಾಜೀನಾಮೆ ನೀಡಿ. ರಾಜೀನಾಮೆ ನೀಡದೇ ಇದ್ದಲ್ಲಿ ಕರ್ನಾಟಕ ದೊಡ್ಡ ಮಟ್ಟದ ಪ್ರತಿಭಟನೆ ಎದುರಿಸಲಿದೆ ಎಂದು ತಿಳಿಸಿದರು.