ಮಂಗಳೂರು,25(DaijiworldNews/AZM):ಉದ್ಯೋಗ ಅರಸಿ ಏಜೆನ್ಸಿಯೊಂದರ ಮೂಲಕ ಕುವೈತ್ಗೆ ತೆರಳಿ, ಅಲ್ಲಿ ಸಂಕಷ್ಟ ಸ್ಥಿತಿಯಲ್ಲಿರುವ ಮಂಗಳೂರಿನ 34 ಯುವಕರ ಗುಂಪು ಸಹಾಯಕ್ಕಾಗಿ ಮೊರೆ ಇಡುತ್ತಿರುವ ವಿಡಿಯೋ ತುಣುಕೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿತ್ತು. ಇದಕ್ಕೆ ಶಾಸಕ ವೇದವ್ಯಾಸ ಕಾಮತ್ ಸ್ಪಂದಿಸಿದ್ದು, ಇದೀಗ ಯುವಕರು ಸಂಪರ್ಕಕ್ಕೆ ಸಿಕ್ಕಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ವೇದವ್ಯಾಸ ಕಾಮತ್ ಪ್ರತಿಕ್ರಿಯೆ ನೀಡಿದ್ದು, ದೂರವಾಣಿಯ ಮೂಲಕ ಕುವೈಟಿನಲ್ಲಿ ಸಿಲುಕಿರುವ ಕರಾವಳಿಗರ ಬಗ್ಗೆ ಮಾಹಿತಿ ಕಲೆ ಹಾಕುವಂತೆ ಮಿತ್ರ ರಾಜ್ ಭಂಡಾರಿಯವರಲ್ಲಿ ಕೇಳಿಕೊಂಡಿದ್ದೆ. ತಕ್ಷಣವೇ ಕಾರ್ಯಪ್ರವೃತರಾದ ರಾಜ್ ಭಂಡಾರಿ ಮತ್ತು ಭಾರತೀಯ ಪ್ರವಾಸಿ ಪರಿಷತ್ತಿನ ತಂಡ ಕೊನೆಗೂ ಸಂಕಷ್ಟದಲ್ಲಿರುವ ನಮ್ಮ ಯುವಕರನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯುವಕರ ಎಲ್ಲಾ ದಾಖಲೆಗಳು ಕೂಡ ಈಗಾಗಲೇ ನಮ್ಮ ಕೈ ಸೇರಿದೆ. ಶೀಘ್ರವೇ ನಮ್ಮ ಯುವಕರನ್ನು ಮರಳಿ ತಾಯ್ನಾಡು ಸೇರಿಸಲು ಸರ್ವ ಪ್ರಯತ್ನವನ್ನೂ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಮಂಗಳೂರಿನ ಮಾಣಿಕ್ಯ ಅಸೋಸಿಯೇಟ್ಸ್ ಪ್ಲೇಸ್ಮೆಂಟ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ಮಾಲೀಕ ಪ್ರಸಾದ್ ಶೆಟ್ಟಿ ಎಂಬವರಿಗೆ ರೂ 65,000 ನೀಡಿ ಜನವರಿ 7ರಂದು ಕುವೈತ್ಗೆ ಯುವಕರು ತೆರಳಿದ್ದರು. ಆದರೆ ಅಲ್ಲಿಗೆ ತೆರಳಿದ ಬಳಿಕ ಸಂಕಷ್ಟಕ್ಕೆ ಒಳಗಾಗಿದ್ದರು.
ಕೆಲ ತಿಂಗಳಿನಿಂದ ಸಂಬಳ ನೀಡಿಲ್ಲ. ಕೆಲಸದ ಸ್ಥಳದಲ್ಲಿ ಊಟದ ವ್ಯವಸ್ಥೆಯನ್ನೂ ರದ್ದುಗೊಳಿಸಿದ್ದಾರೆ. ಊಟಕ್ಕಾಗಿ ನಾವು ಬೇಡುವ ಪರಿಸ್ಥಿತಿ ಬಂದಿದೆ ಎಂದು ವಿಡಿಯೋ ಮೂಲಕ ತಿಳಿಸಿದ್ದರು.
ಮಾತ್ರವಲ್ಲ, ಈ ವಿಡಿಯೋವನ್ನು ಶಾಸಕ ವೇದವ್ಯಾಸ ಕಾಮತ್ ಅವರಿಗೆ ತಲುಪಿಸಿ, ನಮ್ಮ ನೆರವಿಗೆ ಬನ್ನಿ ಎಂದು ಅವರಲ್ಲಿ ಮನವಿ ಮಾಡಿದ್ದರು. ಮಾಧ್ಯಮದವರು, ರಾಜಕಾರಣಿಗಳು ಮತ್ತು ಶಾಸಕರು ನಮ್ಮ ನೆರವಿಗೆ ಬನ್ನಿ. ದಯವಿಟ್ಟು ನಾವು ವಾಪಸು ಊರಿಗೆ ಬರಲು ನೆರವು ನೀಡಿ ಎಂದು ಇವರೆಲ್ಲರೂ ಬೇಡಿಕೊಂಡಿದ್ದರು.
ಈ ಮನವಿಗೆ ಕಾರ್ಯಪ್ರವೃತ್ತರಾದ ಶಾಸಕ ವೇದವ್ಯಾಸ ಕಾಮತ್ ತಕ್ಷಣ ಸ್ಪಂದಿಸಿದ್ದಾರೆ. ಈಗಾಗಲೇ ಯುವಕರನ್ನು ಸಂಪರ್ಕಿಸಿದ್ದು, ಭಾರತಕ್ಕೆ ಮರಳಿ ಕರೆತರುವ ಭರವಸೆ ನೀಡಿದ್ದಾರೆ.