ಕಾಸರಗೋಡು, ನ 27: ನಗರದ ನುಳ್ಳಿಪ್ಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಕಾರು ಅಪಘಾತದಲ್ಲಿ ಓರ್ವ ಯುವಕ ಮೃತಪಟ್ಟ ಘಟನೆ ನಡೆದಿದೆ. ಕಾಸರಗೋಡಿನಿಂದ ಬೋವಿಕ್ಕಾನ ಭಾಗಕ್ಕೆ ತೆರಳುತ್ತಿದ್ದ ಕಾರು ಅಪರಿಚಿತ ಯುವಕನಿಗೆ ಢಿಕ್ಕಿಹೊಡೆದಿದ್ದು ಗಂಭೀರ ಗಾಯಗೊಂಡ ಯುವಕನನ್ನು ಪೊಲೀಸರು ನಗರದ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಯುವಕ ಸಾವಿಗೀಡಾಗಿದ್ದಾನೆ. ಆದರೆ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಯುವಕನ ಬಳಿ ದೊರೆತ ಸಿಮ್ ಕಾರ್ಡ್ ಆತ ಕರ್ನಾಟಕ ನಿವಾಸಿಯಾಗಿರಬಹುದೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಸಿಮ್ ಕಾರ್ಡ್ ಪರಿಶೀಲಿಸಿದಾಗ ಅದು ಕರ್ನಾಟಕದ ಕಲಬುರ್ಗಿ ಗುಲಾಜೆ ಆಲಂದ್ ಎಂಬಲ್ಲಿನ ಹನುಮಂತ ಎಂಬವರಪುತ್ರ ರಾಜು ಹನುಮಂತ (30) ಎಂಬವರ ಹೆಸರಿನಲ್ಲಿರುವುದಾಗಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಘಟನೆ ಬಗ್ಗೆ ನಗರ ಠಾಣೆ ಪೊಲೀಸರು ಕಲಬುರ್ಗಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಇದೇ ವೇಳೆ ಅಪಘಾತ ಬಳಿಕ ಕಾರನ್ನು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದಾಗ ಚಾಲಕ ಪೊವ್ವಲ್ ನಿವಾಸಿ ನಿಸಾಫ್ (32)ನನ್ನು ನಾಗರಿಕರು ತಡೆದು ನಿಲ್ಲಿಸಿ ಪೊಲೀಸರಿಗೊಪ್ಪಿಸಿದ್ದಾರೆ.