ಉಡುಪಿ,ಮೇ26(Daijiworld News/AZM):ಸಿಆರ್ಜೆಡ್ ವ್ಯಾಪ್ತಿಯಲ್ಲಿ ಜೂನ್ 1 ರಿಂದ ಜುಲೈ 31 ರವರೆಗೆ ಮರಳು ತೆಗೆಯಲು ಅವಕಾಶ ಇಲ್ಲ. ಈ ಅವಧಿ ಕಳೆದ ನಂತರ ಮರಳು ತೆಗೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದರು. ಈ ಅವಧಿಯಲ್ಲಿ ಮೀನು ಸಂತಾನೋತ್ಪತ್ತಿ ಅವಧಿ ಆಗಿರುವುದರಿಂದ ಈ ನೀತಿಯನ್ನು ಜಾರಿಗೆಗೊಳಿಸಲಾಗಿದೆ.
ಶನಿವಾರದಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಈ ಕುರಿತು ಮಾತನಾದಿದ ಜಿಲ್ಲಾಧಿಕಾರಿ ನೀತಿ ಸಂಹಿತೆ ಇದ್ದಿದ್ದರಿಂದ ಮರಳು ತೆಗೆಯಲು ಅವಕಾಶ ಇರಲಿಲ್ಲ. ಜುಲೈ ನಂತರ ಜಿಲ್ಲೆಯಲ್ಲಿ ಮರಳು ತೆಗೆಯುವ ಸಂಬಂಧ ಮೇ 15 ರಂದು ನಡೆದ 7 ಸದಸ್ಯರ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಹೇಳಿದರು
ನಿಯಮಾನುಸಾರ ಮರಳು ಗಣಿಗಾರಿಕೆಗೆ ಇರುವ ಅವಕಾಶ, ಸಿಆರ್ಜೆಡ್ ವ್ಯಾಪ್ತಿಯಲ್ಲಿ ಮರಳು ದಿಬ್ಬ ತೆರವಿಗೆ ಇರುವ ನಿಯಮಗಳು, ಯಾವ ತಾಲ್ಲೂಕು ವ್ಯಾಪ್ತಿಯಲ್ಲಿ ಎಷ್ಟು ಪರವಾನಗಿದಾರರು ಇದ್ದಾರೆ. ಎಷ್ಟು ಪ್ರಮಾಣದ ಮರಳು ತೆಗೆಯಲು ಪರಿಸರ ಇಲಾಖೆಯಿಂದ ಅನುಮತಿ ಸಿಕ್ಕಿದೆ ಎಂಬ ಕುರಿತು ಚರ್ಚೆ ನಡೆದಿದೆ ಎಂದು ತಿಳಿಸಿದರು.
ಮರಳು ತೆಗೆಯದಿದ್ದರೆ ನೆರೆ ಅಪಾಯ ಇದೆಯಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನೆರೆ ಎದುರಿಸಲು ಕೈಗೊಳ್ಳಬಹುದಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಈಗಾಗಲೇ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದೆ. ತೊಂದರೆಯಾಗದಂತೆ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.