ಉಳ್ಳಾಲ ನ 28: ತಲಪಾಡಿ ನಾರ್ಲಪಡೀಲಿನಲ್ಲಿ ಬಾರ್ ವಿರೋಧಿಸಿ ನಡೆದ ಪ್ರತಿಭಟನೆ ಬೆನ್ನಲ್ಲೇ ಬಾರಿಗಾಗಿ ನಿಗದಿಪಡಿಸಿದ ಕಟ್ಟಡದ ಕಿಟಕಿ ಗಾಜು ಹಾಗೂ ಇತರೆ ಸೊತ್ತುಗಳನ್ನು ತಂಡವೊಂದು ಪುಡಿಗೈದಿರುವ ಘಟನೆ ಸೋಮವಾರ ತಡರಾತ್ರಿ ಸಂಭವಿಸಿದೆ.
ತಲಪಾಡಿ ನಾರ್ಲಪಡೀಲಿನಲ್ಲಿ ತೆರಳುವ ರಸ್ತೆಬದಿಯಲ್ಲಿ ಬಾರ್ ಕಟ್ಟಡವಿದ್ದು, ಇದರಿಂದ ರಸ್ತೆಯಲ್ಲಿ ಸಂಜೆ ವೇಳೆ ಕೆಲಸ ಬಿಟ್ಟು ತೆರಳುವ ಮಹಿಳೆಯರಿಗೆ ತೊಂದರೆಯಾಗಲಿದೆ. ಕಾರ್ಮಿಕರು ದುಡಿದು ತರುವ ಹಣವನ್ನು ಬಾರಿನಲ್ಲೇ ಸುರಿದು ಖಾಲಿ ಮಾಡುವ ವಾತಾವರಣ ನಿರ್ಮಾಣವಾಗುತ್ತದೆ. ಬಾರ್ ತೆರೆದಲ್ಲಿ ಗ್ರಾಮದ ನೆಮ್ಮದಿ ಹಾಳಾಗುವುದು ನಿಶ್ಚಿತ ಎಂದು ಆರೋಪಿಸಿ ಸೋಮವಾರ ಬಾರ್ ಎದುರುಗಡೆ ಗ್ರಾಮಸ್ಥರು ಸೇರಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯಲ್ಲಿ ತಲಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ವಿನ್ನು ಶೆಟ್ಟಿ, ವೈಭವ್ ಶೆಟ್ಟಿ ಸೇರಿದಂತೆ ತಾಲೂಕು ಪಂಚಾಯತ್ ಸದಸ್ಯರಾದ ಸುರೇಖಾ ಚಂದ್ರಹಾಸ್, ಗಡಿನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದೀಖ್ ತಲಪಾಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ಪ್ರತಿಭಟನೆಯ ಮನವಿಯನ್ನು ಸ್ವೀಕರಿಸಿದ ಸಚಿವ ಖಾದರ್ ಅವರು ಅಬಕಾರಿ ಸಚಿವರಿಗೆ ಹಾಗೂ ಅಬಕಾರಿ ಡಿ.ಸಿಯವರಿಗೆ ಮನವಿ ಸಲ್ಲಿಸುವ ಭರವಸೆಯನ್ನು ನೀಡಿದ್ದರು.
ಪ್ರತಿಭಟನೆ ನಡೆದ ದಿನ ರಾತ್ರಿಯೇ ತಂಡವೊಂದು ಬಾರ್ ಗೆ ಉದ್ದೇಶಿತ ಕಟ್ಟಡದ ಗಾಜು, ಪೈಪ್ ವ್ಯವಸ್ಥೆ ಸಂಪೂರ್ಣವಾಗಿ ಪುಡಿಗೈದಿದೆ. ಘಟನೆಯಿಂದ ಕಟ್ಟಡ ಮಾಲೀಕರಿಗೆ ಸಾವಿರಾರು ರೂ. ನಷ್ಟ ಸಂಭವಿಸಿದೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮೊದಲು ಅಕ್ರಮ ಮದ್ಯದದಂಗಡಿ ತೆರವುಗೊಳಿಸಿ -ಆರೋಪ
ಇದೇ ದಾರಿಯಲ್ಲಿ ಅಂಗಡಿಯೊಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಸಲಾಗುತ್ತಿದೆ. ಇದೇ ಅಂಗಡಿ ಮಾಲೀಕನ ಮುತುವರ್ಜಿಯಲ್ಲಿ ಪ್ರತಿಭಟನೆಯೂ ನಡೆದಿದ್ದು, ಬಾರ್ ತೆರೆದಲ್ಲಿ ಅಂಗಡಿಯ ವ್ಯಾಪಾರದಲ್ಲಿ ನಷ್ಟ ಉಂಟಾಗುವ ಉದ್ದೇಶದಿಂದ ಕಾನೂನಿನಡಿ ಬರುವ ಬಾರ್ಗೆ ಅಡ್ಡಿಪಡಿಸುತ್ತಿದ್ದಾರೆ. ಗ್ರಾಮಸ್ಥರಿಗೆ ಬಾರಿನಿಂದ ತೊಂದರೆಯಾದಲ್ಲಿ, ಅಕ್ರಮ ಮದ್ಯ ಮಾರಾಟದ ಅಂಗಡಿಯಿಂದ ಆಗುತ್ತಿಲ್ಲ. ಈ ಬಗ್ಗೆ ಪೊಲೀಸ್ ಇಲಾಖೆ ಹಾನಿಗೈದವರ ವಿರುದ್ಧ ಕ್ರಮಕೈಗೊಳ್ಳುವ ಜತೆಗೆ ಸಾಧ್ಯವಾದಲ್ಲಿ ಅಕ್ರಮ ಅಂಗಡಿಯನ್ನು ತಡೆಯಲಿ ಎಂದು ಬಾರ್ ಪರವಾಗಿರುವ ಮಂದಿ ಆರೋಪಿಸುತ್ತಿದ್ದಾರೆ.