ಕುಂದಾಪುರ, ಮೇ 27(Daijiworld News/MSP): ರಾತ್ರಿ ಸಂಚರಿಸುತ್ತಿದ್ದ ಕಾರೊಂದಕ್ಕೆ ಕಾಡು ಹಂದಿಯೊಂದು ಅಡ್ಡ ಬಂದ ಪರಿಣಾಮ ಕಾರು ಡಿಕ್ಕಿಯಾಗಿ ಕಾಡು ಹಂದಿ ಸಾವನ್ನಪ್ಪಿದ್ದರೆ ನಿಯಂತ್ರಣ ಕಳೆದುಕೊಂಡ ಕಾರು ಮರಕ್ಕೆ ಡಿಕ್ಕಿಯಾಗಿ ಚಾಲಕ ಸ್ಥಳಲದಲ್ಲಿಯೇ ಸಾವನ್ನಪ್ಪಿರುವ ಘಟನೆ ಶನಿವಾರ ತಡರಾತ್ರಿ ಬೈಂದೂರು ಸಮೀಪದ ಗೋಳಿಹೊಳೆ ಎಂಬಲ್ಲಿ ನಡೆದಿದೆ. ಅಪಘಾತದಲ್ಲಿ ಮೃತಪಟ್ಟ ಕಾರು ಚಾಲಕನನ್ನು ಕಾಲ್ತೋಡು ನಿವಾಸಿ ಕೊಲ್ಲೂರು ಸಮೀಪದಲ್ಲಿ ಹೋಟೆಲ್ ನಡೆಸುತ್ತಿರುವ ಚಂದ್ರಶೇಖರ್ ಶೆಟ್ಟಿ (52) ಎಂದು ಗುರುತಿಸಲಾಗಿದೆ.
ಚಂದ್ರಶೇಖರ ಶೆಟ್ಟಿ ಕೊಲ್ಲೂರಿನಲ್ಲಿ ನಡೆಸುತ್ತಿದ್ದ ಹೋಟೆಲ್ ಕೆಲಸ ಮುಗಿಸಿ ಶನಿವಾರ ತಡ ರಾತ್ರಿ ತನ್ನ ಕ್ವಿಡ್ ಕಾರಿನಲ್ಲಿ ಕಾಲ್ತೋಡಿಗೆ ಬರುತ್ತಿದ್ದರೆನ್ನಲಾಗಿದೆ. ಕೊಲ್ಲೂರು ಬೈಂದೂರು ರಸ್ತೆಯಲ್ಲಿ ಬರುತ್ತಿರುವಾಗ ಗೋಳಿಹೊಳೆ ಮಾವಿನಕಾರು ಎಂಬಲ್ಲಿ ಕಾಡು ಹಂದಿಯೊಂದು ಅಡ್ಡಬಂದಿದ್ದು ಕಾರು ಡಿಕ್ಕಿಯಾಗಿದೆ. ಆದರೆ ಹಂದಿಯನ್ನು ತಪ್ಪಿಸಲು ಹೋಗಿ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಹೊಡೆದ ಪರಿಣಾಮ ಚಾಲಕ ಚಂದ್ರಶೇಖರ್ ತಲೆಗೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇತ್ತ ಕಾರಿಗೆ ಡಿಕ್ಕಿಯಾಗಿದ್ದ ಕಾಡು ಹಂದಿಯೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ಹಂದಿಯ ಮೃತದೇಹ ರಸ್ತೆಯ ಬದಿಯಲ್ಲಿಯೇ ಬಿದ್ದುಕೊಂಡಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.