ಕೋಟ ನ 28 : ಸ್ಪೂರ್ತಿ ಗ್ರಾಮಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆ ತೆಕ್ಕಟ್ಟೆ-ಕೆದೂರು ಇಲ್ಲಿನ ಕಾರ್ಯದರ್ಶಿ, ಸಾಮಾಜಿಕ ಕಾರ್ಯಕರ್ತ ಕೇಶವ ಕೋಟೇಶ್ವರ ತನಗೆ ಲೈಂಗಿಕ ದೌರ್ಜನ್ಯ ಹಾಗೂ ಮಾನಸಿಕ ಹಿಂಸೆ ನೀಡಿದ್ದಾನೆ ಎಂದು ಆರೋಪಿಸಿ ನೊಂದ ಮಹಿಳೆಯೋರ್ವಳು ಕೋಟ ಪೊಲೀಸ್ ಠಾಣೆಗೆ ನ.೨೨ರಂದು ದೂರು ನೀಡಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.
ಸಾಮಾಜಿಕ ಕಾರ್ಯಕರ್ತ ಕೇಶವ ಕೋಟೇಶ್ವರ ಈ ಸಂಸ್ಥೆಯಲ್ಲಿ ಸದಸ್ಯೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳೆಯೋರ್ವಳಿಗೆ ಆಕೆಯ ಸಂಬಳದ ೧.೫೦ಲಕ್ಷ ನೀಡದೆ ಮೋಸ ಮಾಡಿದ್ದು ಈ ಕುರಿತು ಆಕೆ ವಿಚಾರಿಸಿದಾಗ ಲೈಂಗಿಕ ದೌರ್ಜನ್ಯವನ್ನು ನೀಡಿದ್ದು, ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದಾನೆ ಹಾಗೂ ಪ್ರತಿಭಟಿಸಿದಾಗ ಆಕೆಯ ಸ್ಕೂಟರ್ಹಾಗೂ ೧೬ಗ್ರಾಂ ಚಿನ್ನದ ಬಲೆ, ಸೇವೆಯನ್ನು ಮೆಚ್ಚಿ ಸಂಸ್ಥೆಯ ಹಿತೈಷಿಯೋರ್ವರು ಪ್ರತಿ ತಿಂಗಳು ನೀಡುತ್ತಿದ್ದ ೨ಸಾವಿರ ರೂ ಚೆಕ್ಗಳನ್ನು ಬಲವಂತವಾಗಿ ಪಡೆದ್ದಾನೆ ಎಂದು ಆರೋಪಿಸಿದ್ದಾರೆ.
ನ.೧ರಂದು ನಡೆದ ಸಂಸ್ಥೆಯ ಮಹಾಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾವಿಸಿದಾಗ ಆರೋಪಿ ಕೇಶವ ಕೋಟೇಶ್ವರ ಸಂಸ್ಥೆಗೆ ರಾಜೀನಾಮೆ ಕೊಡುವಂತೆ ಹಾಗೂ ಸಭೆಯಿಂದ ಹೊರ ನಡೆಯುವಂತೆ ತನಗೆ ಬೆದರಿಕೆ ಹಾಕಿದ್ದಾನೆ. ಜತೆಗೆ ಖಾಲಿ ಹಾಳೆಯ ಮೇಲೆ ಒತ್ತಾಯ ಪೂರ್ವಕವಾಗಿ ಸಹಿಗಳನ್ನು ಪಡೆದಿರುತ್ತಾನೆ. ತನಗಾದ ಅನ್ಯಾಯದ ಕುರಿತು ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರಿಗೆ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ನೊಂದ ತನಗೆ ನ್ಯಾಯ ಒದಗಿಸಬೇಕು ಎಂದು ಆರೋಪಿಸಿ ಸಂತ್ರಸ್ತೆ ಕೋಟ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.
ಸಂತ್ರಸ್ತೆ ಕುಂದಾಪುರ ಸಾಂತ್ವನ ಕೇಂದ್ರಕ್ಕೆ ಮೊರೆ:
ಪ್ರಕರಣದ ಸಂತ್ರಸ್ತೆ ತನಗೆ ನ್ಯಾಯ ಒದಗಿಸಿಕೊಡುವಂತೆ ಕುಂದಾಪುರ ಮಹಿಳಾ ಸಾಂತ್ವನ ಕೇಂದ್ರದ ಮುಖ್ಯಸ್ಥೆ ರಾಧ ದಾಸ್ ಅವರನ್ನು ಸಂಪರ್ಕಿಸಿದ್ದು, ಇದೀಗ ದಾಸ್ ಅವರು ಈಕೆಯ ಪರ ಹೋರಾಟ ನಡೆಸುತ್ತಿದ್ದಾರೆ. ಪೊಲೀಸರು ಆರೋಪಿಯನ್ನು ತತ್ಕ್ಷಣ ಬಂಧಿಸಬೇಕು ಹಾಗೂ ಯಾವುದೇ ಒತ್ತಡಗಳಿಗೆ ಒಳಗಾಗದೆ ನೊಂದ ಮಹಿಳೆಗೆ ನ್ಯಾಯ ನೀಡಬೇಕು. ಇಲ್ಲವಾದರೆ ಈ ಕುರಿತು ಉಗ್ರ ಹೋರಾಟ ನಡೆಸುವುದಾಗಿ ರಾಧ ದಾಸ್ ತಿಳಿಸಿದ್ದಾರೆ.