ಬಂಟ್ವಾಳ, ಸೆ.7(DaijiworldNews/AA): ಭಾರತ ದೇಶದಲ್ಲಿ ಸಾಕಷ್ಟು ಗಣೇಶನ ದೇವಾಲಯಗಳಿವೆ. ಈ ದೇವಾಲಯಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿರುವ ಗಣೇಶನ ದೇವಾಲಯವೂ ಒಂದು. ಇದು ಬಹಳ ಪ್ರಭಾವಶಾಲಿ ಹಾಗೂ ಮಹಿಮಾನ್ವಿತ ದೇವಾಲಯವಾಗಿದೆ. ಅದುವೇ ಸೌತಡ್ಕ ಮಹಾಗಣಪತಿ ದೇವಸ್ಥಾನ. ಇಲ್ಲಿ ಇಂದು ಶ್ರೀ ಗಣೇಶ ಚತುರ್ಥಿ ಅಂಗವಾಗಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಕ್ಷೇತ್ರ ವಿಶೇಷವಾದ ಹೂವಿನಅಲಂಕಾರದಲ್ಲಿ ಕಂಗೋಳಿಸುತ್ತಿದ್ದು, ಮುಂಜಾನೆಯಿಂದಲೇ ಭಕ್ತರು ಸಾಲು ಗಟ್ಟಿ ಕ್ಷೇತ್ರಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.

ಈ ದಿನ ಕ್ಷೇತ್ರಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚಳವಾಗಿದ್ದರಿಂದ ವಾಹನಗಳ ಪಾರ್ಕಿಂಗ್ ಹಾಗೂ ದೇವರ ದರ್ಶನ ಪಡೆಯುವ ವೇಳೆ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಉತ್ತಮವಾದ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು.
ಇದೊಂದು ಪವಿತ್ರ ಧಾರ್ಮಿಕ ಸ್ಥಳದ ಜೊತೆಗೆ ಪ್ರವಾಸಿತಾಣವೂ ಆಗಿದೆ. ಯಾವುದೇ ಮಠ ಮಂದಿರದ ಅವಶ್ಯಕತೆಯಿಲ್ಲದೆ, ಯಾವುದೇ ಆಡಂಬರವಿಲ್ಲದೆ, ತೆರೆದ ಬಯಲಿನಲ್ಲಿ ಆಕಾಶವನ್ನೇ ತನ್ನ ಚಪ್ಪರವನ್ನಾಗಿ ಮಾಡಿಕೊಂಡು ಸ್ವತಃ ತಾನಾಗಿಯೇ ಬಯಸಿ ಕುಳಿತ ಮಹಾಗಣಪತಿಯ ಪವಿತ್ರ ಕ್ಷೇತ್ರವೇ ಸೌತಡ್ಕ ಶ್ರೀ ಮಹಾಗಣಪತಿಯಾಗಿದೆ. ನಂಬಿ ಬಂದ ಭಕ್ತರಿಗೆ ಸದಾ ಇಂಬು ನೀಡಿದ ಸೌತಡ್ಕ ಕ್ಷೇತ್ರದಲ್ಲಿ ನಿತ್ಯ ಸಾವಿರಾರು ಭಕ್ತರು ಆಗಮಿಸಿ ದೇವರಿಗೆ ಪೂಜೆ ಸಲ್ಲಿಸುತ್ತಾರೆ.
ಪುರಾಣ ಪ್ರಸಿದ್ಧ ಶ್ರೀ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನದಿಂದ 40.3 ಕಿ. ಮೀ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕೇವಲ 17.6 ಕಿ.ಮೀ ದೂರದಲ್ಲಿರುವ ಚೊಕ್ಕಡದ ಬಯಲಿನಲ್ಲಿ ಕುಳಿತು ಭಕ್ತರ ಭವರೋಗಗಳನ್ನು ನಿರಾರಿಸುತ್ತಿರುವ ಶಕ್ತಿಶಾಲಿ ಗಣೇಶ ದೇವಾಲಯವೇ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿಗೆ ಸೇರಿರುವ ಸೌತಡ್ಕದ ಶ್ರೀ ಮಹಾ ಗಣಪತಿ ಕ್ಷೇತ್ರ ಜಿಲ್ಲೆಯ ಅನೇಕ ಸಿದ್ಧಿ ಕ್ಷೇತ್ರಗಳಲ್ಲಿ ಒಂದಾಗಿದೆ. ಪ್ರಶಾಂತವಾದ ಹಚ್ಚ ಹಸಿರಿನ ನಿತ್ಯ ಹರಿದ್ವರ್ಣ ಕಾನನದ ಮಧ್ಯೆ, ತೆರೆದ ಮೈದಾನದಲ್ಲಿ ಶ್ರೀ ಮಹಾ ಗಣಪತಿಯ ಪ್ರತಿಷ್ಠಾಪನೆಗೊಂಡಿದ್ದು ದಿನದ 24 ಗಂಟೆಗಳು ಭಕ್ತರಿಗೆ ದರ್ಶನವನ್ನು ನೀಡುತ್ತಿದೆ. ಈ ದೇವಾಲಯಕ್ಕೆ ಬಂದು ಗಣಪತಿ ಪೂಜೆ ಮಾಡಿಸಿ ಹರಕೆಯನ್ನು ಕಟ್ಟಿಕೊಂಡು ಹರಕೆ ಈಡೇರಿದ ಬಳಿಕ ಇಲ್ಲಿಗೆ ಬಂದು ಗಂಟೆಯನ್ನು ಕಟ್ಟುವ ಸಂಪ್ರದಾಯವಿದೆ.