ಉಡುಪಿ, ಸೆ.9(DaijiworldNews/AA): ಕುಂಜಿಬೆಟ್ಟು ಕೋಚಿಂಗ್ ಸೆಂಟರ್ ಗೆ ತೆರಳಿದ್ದ ವೇಳೆ ನಾಪತ್ತೆಯಾಗಿದ್ದ ಆರ್ಯ(13) ಇಂದು ಬೆಳಗ್ಗೆ ಕೇರಳದ ಪಾಲ್ಘಾಟ್ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.

ರವಿವಾರ ಬೆಳಗ್ಗೆ ಕೋಚಿಂಗ್ ಸೆಂಟರ್ ಆರ್ಯನನ್ನು ಅವರ ತಂದೆ ಪ್ರಕಾಶ್ ಶೆಟ್ಟಿ ಅವರು ಡ್ರಾಪ್ ಮಾಡಿದ್ದಾರೆ. ಬಳಿಕ ತಂದೆ 2:45 ರ ಸುಮಾರಿಗೆ ಆರ್ಯನನ್ನು ಕರೆದುಕೊಂಡು ಹೋಗಲು ಹಿಂದಿರುಗಿದಾಗ, ಆತ ನಾಪತ್ತೆಯಾಗಿದ್ದ. ಸಿಬ್ಬಂದಿಯನ್ನು ವಿಚಾರಿಸಿದಾಗ, ಆರ್ಯ ಆ ದಿನ ಕೋಚಿಂಗ್ ಸೆಷನ್ಗೆ ಹಾಜರಾಗಿರಲಿಲ್ಲ ಎಂದು ಅವರು ತಿಳಿಸಿದ್ದರು. ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಆರ್ಯ, ಇಂದ್ರಾಳಿ ರೈಲು ನಿಲ್ದಾಣದಿಂದ ರೈಲಿನ ಮೂಲಕ ಕೇರಳದ ಕಡೆ ತೆರಳಿರುವುದು ಕಂಡುಬಂದಿದೆ. ಅತ್ತ ಟಿಕೆಟ್ ಇಲ್ಲದೆ ಪ್ರಯಾಣಿಸಿದ ಆರ್ಯನನ್ನು ಪಾಲ್ಘಾಟ್ ರೈಲ್ವೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.