ಬಂಟ್ವಾಳ, ಸೆ.9(DaijiworldNews/AA): ಅಡ್ಡೂರು ಸೇತುವೆಯ ಸಾಮರ್ಥ್ಯ ಪರೀಕ್ಷೆ ಮಾಡಲು ಕರ್ನಾಟಕ ಸರಕಾರದ ಅಧೀನದಲ್ಲಿರುವ ಟೆಸ್ಟಿಂಗ್ ಯಂತ್ರ ಕೊನೆಗೂ ಪೊಳಲಿಗೆ ಆಗಮಿಸಿದೆ. ದುರ್ಬಲಗೊಂಡ ಅಡ್ಡೂರು ಸೇತುವೆಯ ಮೇಲೆ ಘನ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿದ ಬಳಿಕ ಸೇತುವೆಯ ಸಾಮರ್ಥ್ಯ ಪರಿಶೀಲನೆಗೆ ಬೆಂಗಳೂರಿನಿಂದ ಯಂತ್ರ ಬರಲಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದರು.


ಸೇತುವೆ ಸಾಮರ್ಥ್ಯದ ಬಗ್ಗೆ ಇಂಜಿನಿಯರ್ ಗಳು ವರದಿ ನೀಡಿದ ಬಳಿಕ ಮುಂದಿನ ನಿರ್ಧಾರವನ್ನು ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದರು. ಅಲ್ಲಿಯವರೆಗೆ ಸೇತುವೆಯ ಮೂಲಕ ಘನ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ. ಮತ್ತು ಸೇತುವೆ ಎರಡು ಭಾಗದಲ್ಲಿ ಪೋಲೀಸ್ ಚೆಕ್ ಪೋಸ್ಟ್ ಗಳನ್ನು ಹಾಕಲಾಗಿ ಕಾವಲು ಮಾಡಲಾಗುತ್ತದೆ ಎಂದು ತಿಳಿಸಿದ್ದರು. ಆದರೆ ಇದರಿಂದ ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರಿಗೆ ಮಂಗಳೂರು ಹಾಗೂ ಇತರ ಕಡೆಗೆ ಸಂಚಾರ ಮಾಡಲು ತೊಂದರೆಯಾಗುತ್ತಿದೆ ಎಂದು ಅನೇಕ ಬಾರಿ ಜಿಲ್ಲಾಧಿಕಾರಿ ಸಹಿತ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರು.
ಸೇತುವೆಯ ಮೂಲಕ ಸಂಚಾರಕ್ಕೆ ನಿರ್ಬಂಧ ಹೇರಿ ತಿಂಗಳು ಕಳೆದರೂ ಅಧಿಕಾರಿ ವರ್ಗ ಸ್ಪಷ್ಟವಾದ ಮಾಹಿತಿ ನೀಡಿಲ್ಲ ಮತ್ತು ಸಾಮರ್ಥ್ಯ ಪರೀಕ್ಷೆ ಯಂತ್ರವನ್ನು ತರಿಸಿಲ್ಲ ಎಂದು ಸ್ಥಳೀಯರು ಆರೋಪಮಾಡಿದ್ದರು. ಇದೀಗ ಕೊನೆಗೂ ಯಂತ್ರ ಸ್ಥಳಕ್ಕೆ ಆಗಮಿಸಿ, ಸಾಮಾರ್ಥ್ಯ ಪರೀಕ್ಷೆ ಆರಂಭಿಸಿದೆ.
ಇವರು ವರದಿ ನೀಡಿದ ಬಳಿಕ ಸ್ಪಷ್ಟವಾದ ಚಿತ್ರಣ ಸಿಗಲಿದ್ದು, ಮುಂದಿನ ಕ್ರಮವನ್ನು ಅಧಿಕಾರಿಗಳು ವಹಿಸಲಿದ್ದಾರೆ. ಪರೀಕ್ಷೆ ಯಂತ್ರ ಸ್ಥಳಕ್ಕೆ ಆಗಮಿಸಿದ ವೇಳೆ ಅಡ್ಡೂರು ಸೇತುವೆ ಹೋರಾಟ ಸಮಿತಿಯವರು ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು.
ಜನರ ಸಂಕಷ್ಟವನ್ನು ಅವರಲ್ಲಿ ತಿಳಿಸಿದರು. ಆದಷ್ಟು ಶೀಘ್ರವಾಗಿ ಸಮಸ್ಯೆಗೆ ಪರಿಹಾರವನ್ನು ನೀಡಿ ಎಂದು ತಿಳಿಸದ್ದಲ್ಲದೆ ವರದಿ ಬಳಿಕ ಹೋರಾಟ ಸಮಿತಿಯ ಮೂಲಕ ಮುಂದಿನ ಹೋರಾಟವನ್ನು ಮಾಡುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಬೂಬಕ್ಕರ್ ಅಮ್ಮುಂಜೆ, ಚಂದ್ರಶೇಖರ ಶೆಟ್ಟಿ, ಉಮೇಶ್ ಆಚಾರ್ಯ, ನ್ಯಾಯವಾದಿ ಚಂದ್ರಶೇಖರ್ ರಾವ್, ಜಯ ರಾಮಕೃಷ್ಣ ಪೊಳಲಿ, ಕಾರ್ತಿಕ್ ಬಲ್ಲಾಳ್, ಚಂದ್ರಶೇಖರ್ ಭಂಡಾರಿ ಮುಂತಾದವರು ಉಪಸ್ಥಿತರಿದ್ದರು.