ಕುಂದಾಪುರ, ಮೇ 28 (Daijiworld News/MSP): ಪಾದಚಾರಿಯೊಬ್ಬರಿಗೆ ವಾಹನಗಳೆರಡು ಡಿಕ್ಕಿಯಾದ ಪರಿಣಾಮ ಪಾದಾಚಾರಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಸೋಮವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಉಪ್ಪುಂದದಲ್ಲಿ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟ ಪಾದಾಚಾರಿಯನ್ನು ಉಪ್ಪುಂದ ನಂದನವನ ನಿವಾಸಿ ಕೃಷ್ಣ ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ತೆಂಗಿನಕಾಯಿ ಸುಲಿಯುತ್ತಿದ್ದ ಕೃಷ್ಣ ಸೋಮವಾರ ರಾತ್ರಿ 8 ಗಂಟೆಯ ಸುಮಾರಿಗೆ ಉಪ್ಪುಂದ ಅಂಬಾಗಿಲಿನಿಂದ ಮನೆ ಕಡೆಗೆ ನಡೆದು ಹೋಗುತ್ತಿದ್ದರು. ಇದೇ ಸಂದರ್ಭ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಂದೂರಿನಿಂದ ಕುಂದಾಪುರದ ಕಡೆಗೆ ಹೋಗುತ್ತಿದ್ದ ವಾಹನವೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕೃಷ್ಣ ಬೈಂದೂರು ಕಡೆಗೆ ಸಂಚರಿಸುವ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಅದೇ ಸಮಯಕ್ಕೆ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಪ್ರಯಾಣಿಸುತ್ತಿದ್ದ ಲಾರಿಯೊಂದು ಕೃಷ್ಣರ ತಲೆಯ ಮೇಲೆ ಹಾದು ಹೋಗಿದೆ ಎನ್ನಲಾಗಿದೆ. ಸರಣಿ ಢಿಕ್ಕಿಯಿಂದಾಗಿ ಕೃಷ್ಣ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.