ಮಂಗಳೂರು, ಮೇ28(Daijiworld News/SS): ಕುವೈತ್'ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ದಕ್ಷಿಣ ಕನ್ನಡದ 34 ಯುವಕರನ್ನು ರಕ್ಷಿಸಬೇಕಾಗಿ ಕೋರಿ ಸಂಸದ ನಳಿನ್ ಕುಮಾರ್ ಕಟೀಲ್ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಪತ್ರ ಬರೆದಿದ್ದಾರೆ.
ಯುವಕರನ್ನು ಕುವೈತ್'ಗೆ ಕರೆದೊಯ್ಯುವಾಗ ಅವರಿಗೆ ಆ ದೇಶದಲ್ಲಿ ಒಳ್ಳೆಯ ಉದ್ಯೋಗ ಹಾಗೂ ಸಂಬಳದ ಭರವಸೆ ನಿಡಲಾಗಿತ್ತು, ಆದರೆ ಈಗ ಆ ಯುವಕರಿಗೆ ತಾವು ವಂಚನೆಗೆ ಒಳಗಾಗಿರುವುದು ಅರಿವಾಗಿದೆ. ಅಲ್ಲಿಗೆ ತೆರಳಿದವರೆಲ್ಲರೂ ಬಡವರಾಗಿದ್ದು, ಕಳೆದ ಆರು ತಿಂಗಳಿನಿಂದ ಅವರಿಗೆ ಯಾವುದೇ ಉದ್ಯೋಗವಿಲ್ಲದೆ ಅತಂತ್ರದಲ್ಲಿದ್ದಾರೆ ಎಂದು ಪತ್ರದಲ್ಲಿ ಹೇಳಿದ್ದಾರೆ.
ಇದೀಗ ಅವರೆಲ್ಲರೂ ಮರಳಿ ಭಾರತಕ್ಕೆ ಬರುವ ಮನಸ್ಸು ಮಾಡಿದ್ದಾರೆ. ಆದರೆ ಅವರ ಮೂಲ ಪಾಸ್ಪೋರ್ಟ್ನ್ನು ಅವರನ್ನು ಕರೆದೊಯ್ದ ಏಜೆನ್ಸಿ ಇಟ್ಟುಕೊಂಡಿದೆ. ಈ ಹಿನ್ನೆಲೆಯಲ್ಲಿ ವಿದೇಶಾಂಗ ಇಲಾಖೆ ಕುವೈತ್ ರಾಜತಾಂತ್ರಿಕ ವಿಭಾಗವನ್ನು ಸಂಪರ್ಕಿಸಿ ಪಾಸ್ಪೋರ್ಟ್ನ್ನು ಮರಳಿಸಿ ಅವರನ್ನು ಬಿಡುಗಡೆ ಮಾಡಿ ಇಲ್ಲಿಗೆ ಕರೆತರುವ ಬಗ್ಗೆ ತುರ್ತು ಕ್ರಮ ವಹಿಸಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.
ನಳಿನ್ ಕಟೀಲ್ ಅವರು ಪತ್ರದೊಡನೆ ಆ ಯುವಕರ ಪಾಸ್ ಪೋರ್ಟ್ ನಕಲಿ ಪ್ರತಿಯನ್ನೂ ಲಗತ್ತಿಸಿ ಸಚಿವರಿಗೆ ರವಾನಿಸಿದ್ದಾರೆ.