ಉಡುಪಿ, ಮೇ 28 (Daijiworld News/SM): ಪ್ರಧಾನಿ ನರೇಂದ್ರ ಮೋದಿ ಅವರು ಮರು ಆಯ್ಕೆ ಆದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸಚಿವ ರೇವಣ್ಣ ಹೇಳಿದ್ದರು. ಆದರೆ ಇನ್ನೂ ರಾಜಕೀಯದಲ್ಲಿ ಮುಂದುವರಿದಿದ್ದಾರೆ. ಬಹುಷ: ರೇವಣ್ಣಗೆ ಅವರ ಪ್ರೀತಿಯ ಲಿಂಬೆಹಣ್ಣು ರಾಜಕಾರಣ ಬಿಡಬೇಡ ಅಂದಿರಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ವ್ಯಂಗ್ಯವಾಡಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ರೇವಣ್ಣ ಆಡಿದ ಮಾತು ಎಷ್ಟು ಸಾರಿ ಉಳಿಸ್ಕೊಂಡಿದಾರೋ ಗೊತ್ತಿಲ್ಲ ಎಂದು ಟೀಕಿಸಿದ್ದಾರೆ. ರಾಜ್ಯ ಸರ್ಕಾರ ಆಡಳಿತ ಮತ್ತು ಜನಾಭಿಪ್ರಾಯ ಎರಡರಲ್ಲೂ ನಿರ್ಜೀವವಾಗಿದೆ. ಸತ್ತುಹೋದ ಸರ್ಕಾರಕ್ಕೆ ಆಮ್ಲಜನಕ ತುಂಬುವ ಕೆಲಸವಾಗುತ್ತಿದೆ. ಅನುಭವಿ ಮಂತ್ರಿಗಳನ್ನು ಕೈಬಿಟ್ಟು ಹೊಸಬರ ಸೇರ್ಪಡೆಗೆ ತಯಾರಿ ನಡೆಯುತ್ತಿದೆ. ಸಿಎಂ ಕುಮಾರಸ್ವಾಮಿ ಸರ್ಕಾರ ನಡೆಸುವ ಸ್ಥಿತಿಯಲ್ಲೇ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಜನಾದೇಶ ಬಂದಾಗಿದೆ. ಮೊದಲು ಖುರ್ಚಿಯಿಂದ ಕೆಳಗಿಳಿಯಿರಿ ಎಂದರು.
ಯು.ಟಿ. ಖಾದರ್ ಮತ್ತು ಜಯಮಾಲರನ್ನು ಸಚಿವ ಸಂಪುದಿಂದ ಕೈ ಬಿಡಲು ಮುಂದಾಗಿದ್ದಾರೆ. ಈ ಹಿಂದೆ ಕುಮಾರಸ್ವಾಮಿ ಕರಾವಳಿ ಜನರಿಗೆ ಬುದ್ದಿ ಇಲ್ಲ ಅಂದಿದ್ದರು. ಹಾಗಾಗಿ ಕರಾವಳಿಯ ಇಬ್ಬರು ಸಚಿವರನ್ನು ಕೈ ಬಿಡಲು ಹೊರಟಿರಬೇಕು. ಕರಾವಳಿ ಜನರಿಗೆ ಬುದ್ದಿ ಇಲ್ಲ ಹಾಗಾಗಿ ಜೆಡಿಎಸ್ ಗೆ ವೋಟ್ ಹಾಕಿಲ್ಲ ಅಂತೀರಿ. ಈಗ ಇಡೀ ರಾಜ್ಯದಲ್ಲೇ ಜೆಡಿಎಸ್ಗೆ ವೋಟ್ ಹಾಕಿಲ್ಲ. ಹಾಗಾದರೆ ರಾಜ್ಯದ ಜನತೆಗೆ ಬುದ್ದಿ ಇಲ್ಲ ಅಂತೀರಾ ಎಂದು ಪ್ರಶ್ನಿಸಿದರು.