ಸುಬ್ರಹ್ಮಣ್ಯ, ಮೇ28(Daijiworld News/SS): ಪ್ರಮುಖವಾಗಿ ಕರಾವಳಿ ಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಅವರ ಅಭಿಮಾನಿಗಳು ತೋರುವ 'ಅಭಿಮಾನ' ಅಂತಿಂತದಲ್ಲ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲೂ ಮೋದಿ ಗೆದ್ದು ಬರಬೇಕೆಂದು ಹಲವು ಪೂಜೆ, ಪುನಸ್ಕಾರಗಳು ನಡೆದಿದ್ದವು. ಈ ಬಾರಿಯೂ ಮೋದಿಯ ಅಭಿಮಾನಿಗಳು ಮತ್ತು ಸಂಘ ಪರಿವಾರದ ಕಾರ್ಯಕರ್ತರು ದೇವರ, ದಿಂಡರ, ದೈವಗಳ ಮೊರೆ ಹೋಗಿದ್ದರು.
ಈ ಬಾರಿ ನಡೆದ ಲೋಕಸಭೆ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ, ಕುಕ್ಕೆ ಕ್ಷೇತ್ರದ ಕಾರಣಿಕ ಪುರುಷರಾಯ ದೈವಕ್ಕೆ ಹರಕೆಯ ಒಂಟಿ ನೇಮ ವೈಭವದಿಂದ ನಡೆದಿದೆ.
ಕುಕ್ಕೆ ಸುಬ್ರಹ್ಮಣ್ಯದ ಮೋದಿ ಅಭಿಮಾನಿ ಬಳಗವು, ನರೇಂದ್ರ ಮೋದಿ ಮತ್ತೊಮ್ಮೆ ಭಾರತದ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರೆ ಕುಕ್ಕೆ ಕ್ಷೇತ್ರದ ಕಾರಣಿಕ ಪುರುಷರಾಯ ದೈವಕ್ಕೆ ಒಂಟಿ ನೇಮ ನೀಡುವುದಾಗಿ ಹರಕೆ ಹೊತ್ತುಕೊಂಡಿದ್ದರು.
ಅದರಂತೆ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯದ ಅಭಿಮಾನಿಗಳು ಕುಕ್ಕೆ ಕಾರಣಿಕ ದೈವ ಪುರುಷರಾಯನಿಗೆ ಒಂಟಿ ನೇಮ ಸೇವೆ ಅರ್ಪಿಸಿ ಹರಕೆ ತೀರಿಸಿದ್ದಾರೆ.