ಕಾರ್ಕಳ, ಸೆ.21(DaijiworldNews/AA): ಮಹಿಳೆಯರಿಬ್ಬರ ಕುತ್ತಿಗೆಯಿಂದ ಅಪರಿಚಿತರಿಬ್ಬರು ಚಿನ್ನದ ಸರವನ್ನು ಕಸಿದುಕೊಂಡು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಮೂಡುಬಿದಿರೆ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.
ಅಂತರ್ ಜಿಲ್ಲಾ ಪೊಲೀಸ್ ಠಾಣೆಗಳಲ್ಲಿ, ಹಲವಾರು ದರೋಡೆ, ಕಳ್ಳತನ, ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿರುವ ಮಂಗಳೂರಿನ ಪೆರ್ಮನ್ನೂರು ಗ್ರಾಮದ ಚೆಂಬುಗುಡ್ಡೆ ನಿವಾಸಿ ಹಬೀಬ್ ಹಸನ್, ಯಾನೆ ಹಬ್ಬಿ ಯಾನೆ ಚೆಂಬುಗುಡ್ಡೆ, ಹಬ್ಬಿ(42) ಮತ್ತು ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಈ ಮೊದಲು ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದ ಬಂಟ್ವಾಳ, ಜೋಡು ಮಾರ್ಗ ನಿವಾಸಿ ಉಮ್ಮರ ಸಿಯಾಫ್ ಯಾನೆ ಚಿಯಾ(29) ಬಂಧಿತ ಆರೋಪಿಗಳು.
ಇದೇ ಆಗಸ್ಟ್ 15ರಂದು ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾರ್ಪಾಡಿ ಗ್ರಾಮದ ವಿವೇಕಾನಂದ ನಗರದ ಬಳಿ ನಿರ್ಮಾಲ ಪಂಡಿತ್(70) ಎಂಬವರ ಕುತ್ತಿಗೆಯಿಂದ ಸುಮಾರು 24 ಗ್ರಾಂ ಮೌಲ್ಯದ ಚಿನ್ನದ ಸರವನ್ನು ಹಾಗೂ ಸೆ. 02 ರಂದು ಮೂಡಬಿದ್ರೆ ತಾಲೂಕು ಮೂಡು ಮಾರ್ನಾಡು ಗ್ರಾಮದ ಬಸದಿ ಬಳಿ ಪ್ರೇಮಾ (82) ಎಂಬವರ ಕುತ್ತಿಗೆಯಿಂದ ಸುಮಾರು 3 ಪವನ್ ತೂಕದ ಚಿನ್ನದ ಸರವನ್ನು ಬಂಧಿತ ಆರೋಪಿಗಳು ಸ್ಕೂಟರ್ ನಲ್ಲಿ ಬಂದು ಕಸಿದುಕೊಂಡು ಹೋಗಿದ್ದರು. ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳು ಪ್ರಕರಣಗಳ ಕೃತ್ಯಕ್ಕೆ ಬಳಸಿದ ಸ್ಕೂಟರ್ ಅನ್ನು ಮಂಗಳೂರು ನಗರದ ಕದ್ರಿ ಪೊಲೀಸ್ ಠಾಣೆಯಲ್ಲಿ ಕಳವು ಆಗಿರುವ ಸ್ಕೂಟರ್ ಆಗಿರುತ್ತದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಸ್ಕೂಟರ್ ಹಾಗೂ ಚಿನ್ನಾಭರಣಗಳನ್ನು ಸ್ವಾಧೀನ ಪಡಿಸಿಕೊಂಡಿದ್ದು, ಆರೋಪಿಗಳಿಂದ ಸ್ವಾಧೀನ ಪಡಿಸಿಕೊಂಡ ಸೊತ್ತುಗಳ ಅಂದಾಜು ಮೌಲ್ಯ ರೂ. 2,50,000 ಆಗಿರುತ್ತದೆ.
ಪ್ರಕರಣದಲ್ಲಿ, ದಸ್ತಗಿರಿಯಾಗಿರುವ 1 ನೇ ಆರೋಪಿ ಹಬೀಬ್ ಹಸನ್, ಯಾನೆ ಹಬ್ಬಿ ಯಾನೆ ಚೆಂಬುಗುಡ್ಡೆ ಹಬ್ಬಿ ವಿರುದ್ಧ ವಿವಿಧ ಠಾಣೆಗಳಲ್ಲಿ ಈವರೆಗೆ ಸುಮಾರು 42 ಪ್ರಕರಣಗಳು ದಾಖಲಾಗಿರುತ್ತದೆ.
ಪ್ರಸ್ತುತ ಈತನು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಇದ್ದ ಕಾರಣ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ, 2 ದಸ್ತಗಿರಿ ವಾರೆಂಟ್, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 1 ದಸ್ತಗಿರಿ ವಾರೆಂಟ್, ಉಳ್ಳಾಲ ಪೊಲೀಸ್ ಠಾಣೆಯಲ್ಲಿ 5 ದಸ್ತಗಿರಿ ವಾರೆಂಟ್, ಮುಲ್ಕಿ ಪೊಲೀಸ್ ಠಾಣೆಯಲ್ಲಿ 1 ದಸ್ತಗಿರಿ ವಾರೆಂಟ್, ಕೋಣಾಜೆ ಪೊಲೀಸ್ ಠಾಣೆಯಲ್ಲಿ 2 ದಸ್ತಗಿರಿ ವಾರೆಂಟ್, ಬಟ್ಟೆ ಪೊಲೀಸ್ ಠಾಣೆಯಲ್ಲಿ 1 ದಸ್ತಗಿರಿ ವಾರೆಂಟ್ ಮತ್ತು ಉಡುಪಿ ಜಿಲ್ಲೆಯ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2 ದಸ್ತಗಿರಿ ವಾರೆಂಟ್ ಗಳಿದ್ದು, ಒಟ್ಟು 15 ದಸ್ತಗಿರಿ ವಾರೆಂಟ್ ನ್ಯಾಯಾಲಯವು ಹೊರಡಿಸಿದೆ.