ಕುಂದಾಪುರ, ಸೆ.22(DaijiworldNews/AA): ಸಮಾಜದ ಆರ್ಥಿಕ ಪ್ರಗತಿಗೆ ಪೂರಕವಾಗಿ, ಆಶಾಕಿರಣವಾಗಿ, ಆಪತ್ಭಾಂದವವಾಗಿ ಸಹಾಯ ಮಾಡುವುದೇ ಸಹಕಾರಿ ಸಂಸ್ಥೆಗಳು. ಆಸಕ್ತಿ, ಛಲ, ನಿರಂತರ ಪ್ರಯತ್ನ, ದೂರದೃಷ್ಟಿತ್ವ, ಶ್ರದ್ದೆ, ಸೇವಾ ಮನೋಭಾವ, ಕಠಿಣ ಪರಿಶ್ರಮದ ಮೂಲಕ ಇವತ್ತು ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸಾವಿರ ಕೋಟಿ ವ್ಯವಹಾರದ ಮೂಲಕ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಧರ್ಮಗುರುಗಳಾದ ಅ.ವಂ. ಮೊನ್ಸಿಂಜರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಅಭಿಪ್ರಾಯ ಪಟ್ಟರು.
ಅವರು ಕೋಟೇಶ್ವರದ ಸಹಕಾ ಕನ್ವೆನ್ಶನ್ ಸೆಂಟರ್ನಲ್ಲಿ ಸೆ.22ರಂದು ನಡೆದ ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ, ಕುಂದಾಪುರ ಇದರ 1,000 ಕೋಟಿ ವ್ಯವಹಾರದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಹಕಾರಿ ಸಂಸ್ಥೆಗಳು ಠೇವಣಾತಿ ಸಂಗ್ರಹ, ಸಾಲ ನೀಡುವುದಷ್ಟೇ ಅಲ್ಲ. ಸದಸ್ಯರ ಆರ್ಥಿಕಾಭಿವೃದ್ಧಿಗೂ ಒತ್ತು ನೀಡಬೇಕಾಗುತ್ತದೆ. ಆ ಮೂಲಕ ಸಂಸ್ಥೆ ಬಲಿಷ್ಠವಾಗಿ ಬೆಳೆಯುತ್ತದೆ. ಸಹಕಾರಿಗಳ ವಿಶ್ವಾಸ ಗಳಿಸಿಕೊಳ್ಳುವ ಕೆಲಸ ನಿರಂತರವಾಗಿ ಮಾಡುವುದರಿಂದ ಇವತ್ತು ಈ ಸಂಸ್ಥೆ ಪ್ರಬಲವಾಗಿ ಬೆಳೆದಿದೆ ಎಂದರು.
ಜೋನ್ಸನ್ ಡಿ'ಅಲ್ಮೇಡಾ ನೇತೃತ್ವದ ತ್ವರಿತ ಅವಧಿಯಲ್ಲಿ ಕ್ರಾಂತಿಯೇ ಆಗಿದೆ. ಚತುರ ಸಂಘಟಕರಾಗಿ, ಸಹಕಾರ ತತ್ವ, ಧೋರಣೆ, ದೂರದೃಷ್ಟಿತ್ವ, ಅಧ್ಯಯನದ ಮೂಲಕ ಸಹಕಾರದ ಮೂಲಕ ಪರಿಣಾಮಕಾರಿಯಾಗಿ ಜನರನ್ನು ತಲುಪುವ ಮಾರ್ಗ ಕಂಡುಕೊಂಡರು. ಜನರ ನಾಡಿಮಿಡಿತ ಅರಿತರು. ಸದಸ್ಯರ ಆವಶ್ಯಕತೆಗಳಿಗೆ ಸ್ಪಂದಿಸಿದರು. ಸೊಸೈಟಿಯನ್ನು ಇನ್ನಷ್ಟು ಜನಸ್ನೇಹಿಯಾಗಿ ಮಾರ್ಪಡಿಸಿದರು. ಕಟ್ಟಕಡೆಯ ಸದಸ್ಯನು ಕೂಡಾ ಸೊಸೈಟಿಯಿಂದ ಸುಲಭವಾಗಿ ಸಾಲಸೌಲಭ್ಯ ಪಡೆಯುವಂತೆ ಮಾಡಿದ್ದಾರೆ. ಸಂಸ್ಥೆಯು ಸಾಧಿಸಿದ ಸರ್ವತೋಮುಖ ಅಭಿವೃದ್ಧಿಗಾಗಿ ಕಳೆದ ಐದು ವರ್ಷದಿಂದ ಸತತವಾಗಿ ದ.ಕ ಜಿ.ಸ.ಬ್ಯಾಂಕ್ನಿಂದ ಸಾಧನ ಪ್ರಶಸ್ತಿ ಪಡೆಯುತ್ತಿರುವುದು ಸಾಧನೆಯ ಪ್ರಗತಿಯನ್ನು ತೋರಿಸುತ್ತದೆ ಎಂದು ತಿಳಿಸಿದರು.
ಉನ್ನತ ವ್ಯಾಸಂಗ ಮಾಡುವ ಸೊಸೈಟಿಯ ಸದಸ್ಯರ ಮಕ್ಕಳಿಗೆ ಸಾಂಕೇತಿಕವಾಗಿ ವಿದ್ಯಾರ್ಥ ವೇತನ ವಿತರಿಸಿ ಮಾತನಾಡಿದ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರು, ಸಹಕಾರಿ ಸಂಸ್ಥೆಯನ್ನು ಕಟ್ಟುವುದು ಸುಲಭ, ಮುನ್ನೆಡಿಸಿಕೊಂಡು ಹೋಗುವುದು ಕಷ್ಟ. 32 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ಸೇವೆ ನೀಡುತ್ತಿರುವ ಈ ಸಂಸ್ಥೆ 12 ಶಾಖೆಗಳೊಂದಿಗೆ ಈ ವರದಿ ಸಾಲಿನಲ್ಲಿ 4.05 ಕೋಟಿ ಲಾಭ ಗಳಿಸಿ, 22% ಡಿವಿಡೆಂಡ್ ನೀಡುತ್ತಿರುವುದು ಶ್ಲಾಘನೀಯ ಎಂದರು.
ಅವಿಭಜಿತ ದ.ಕ ಜಿಲ್ಲೆಯಲ್ಲಿ ಅನೇಕ ರಾಷ್ಟ್ರೀಕೃತ ಬ್ಯಾಂಕುಗಳು ಹುಟ್ಟಿದವು. ಆದರೆ ಇವತ್ತು ಅವು ಸಂಕುಚಿತಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ಸಹಕಾರಿ ಸಂಘಗಳು ಉತ್ತಮ ಸೇವೆಯೊಂದಿಗೆ ವಿಕಸಿತಗೊಳ್ಳುತ್ತಿವೆ. ಸದಸ್ಯರ ಆರ್ಥಿಕ ಸ್ವಾವಲಂಬನೆಗೆ ಒತ್ತು ನೀಡುವುದರೊಂದಿಗೆ ಸರ್ವಾಂಗೀಣ ಪ್ರಗತಿಗೆ ಸಹಕಾರ ನೀಡುತ್ತಿವೆ. ಗ್ರಾಮಾಂತರ ಪ್ರದೇಶಗಳಲ್ಲಿ ಶಾಖೆ ಆರಂಭಿಸುವ ಮೂಲಕ ಸದಸ್ಯರಲ್ಲಿಗೆ ಸಹಕಾರ ಸಂಘಗಳು ಹೋಗುತ್ತಿವೆ ಎಂದು ಹೇಳಿದರು.
ದಾಯ್ಜಿವರ್ಲ್ಡ್ ಮಿಡಿಯಾ ಪ್ರೈವೇಟ್ ಲಿಮಿಟೆಡ್ನ ಸಂಸ್ಥಾಪಕರಾದ ವಾಲ್ಟರ್ ನಂದಳಿಕೆ ಶುಭ ಶಂಸನೆಯ ಮಾತುಗಳನ್ನಾಡಿ, ಸಮಯ ಹಾಗೂ ಉತ್ತಮ ಚಿಂತನಾ ಶಕ್ತಿಯ ಮೂಲಕ ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅರ್ಥ ಮಾಡಿಕೊಂಡಿರುವ ಪರಿಣಾಮ ಈ ಸಾಧನೆ ಸಾಧ್ಯವಾಗಿದೆ. ಮುಂದಿನ 8 ವರ್ಷಗಳಲ್ಲಿ ಇನ್ನೂ 1 ಸಾವಿರ ಕೋಟಿ ವ್ಯವಹಾರ ಮಾಡಲಿದೆ. ಈಗ ಒಂದು ಸಾವಿರ ಕೋಟಿ ವ್ಯವಹಾರ ಮಾಡಿರುವುದು ಪ್ರಗತಿ, ಯಶಸ್ಸು ಅಲ್ಲ, ಅದು ನಿರಂತರ ಪ್ರಗತಿಯ ರೂಪದಲ್ಲಿ ಬೆಳೆಯುತ್ತ ಹೋಗಬೇಕು, ಇದನ್ನು ಪ್ರಗತಿ ಎಂದೇ ಭಾವಿಸಿ ಮುನ್ನಡೆಯಿರಿ ಎಂದು ಹೇಳಿದರು.
ಕುಂದಾಪುರ ವಲಯದ ಪ್ರಧಾನ ಧರ್ಮಗುರುಗಳಾದ ಅತೀ ವಂ.ಪಾವ್ಲ್ ರೇಗೊ, ಉಡುಪಿ ಜಿಲ್ಲೆ ಸಹಕಾರ ಸಂಘಗಳ ಉಪ ನಿಬಂಧಕರಾದ ಲಾವಣ್ಯ ಕೆ.ಆರ್ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಜೋನ್ಸನ್ ಡಿ ಅಲ್ಮೇಡಾ ಸಂಸ್ಥೆಯ ಸದಸ್ಯರೆಲ್ಲರ ಸಹಕಾರ, ಆಡಳಿತ ಮಂಡಳಿ, ಸಿಬ್ಬಂದಿ ವರ್ಗದ ಸತತ ಪರಿಶ್ರಮದ ಫಲವಾಗಿ ಈ ಸಾಧನೆ ಮಾಡುವಂತಾಯಿತು. ಅನಿರೀಕ್ಷಿತ ಸವಾಲುಗಳನ್ನು ಎದುರಿಸಿದರೂ ನಮ್ಮ ಸಂಕಲ್ಪ ಮತ್ತು ನಿಷ್ಠೆಯು ನಮ್ಮನ್ನು ಹೊಸ ಎತ್ತರಕ್ಕೆ ಏರಿಸಿತು. ಇದು ಸಂಸ್ಥೆಗೆ ಒಂದು ಐತಿಹಾಸಿಕ ಮೈಲಿಗಲ್ಲು. ಉಡುಪಿ ಜಿಲ್ಲೆಯಲ್ಲಿ ನಮ್ಮ ಸಂಸ್ಥೆ ಪ್ರತಿಷ್ಠಿತ ಸಂಸ್ಥೆಯಾಗಿ ಮೂಡಿ ಬರುವಲ್ಲಿ ಸಹಕರಿಸಿದ ನಿರ್ದೇಶಕರು, ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸರ್ವ ಸದಸ್ಯರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಐದು ವಲಯಗಳ ವ್ಯಾಪ್ತಿಯಲ್ಲಿ ಕಡು ಬಡವರನ್ನು ಗುರುತಿಸಿ ಅವರಿಗೆ ಮನೆ ನಿರ್ಮಿಸಿ ಕೊಡುವ ಯೋಜನೆಯನ್ನು ಅನಾವರಣಗೊಳಿಸಲಾಯಿತು.
ಅತಿಥಿಗಳಾಗಿ ಆಗಮಿಸಿದ ಎಲ್ಲರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಸಂಸ್ಥೆಯ ಸದಸ್ಯರ ವತಿಯಿಂದ ಅಧ್ಯಕ್ಷರಾದ ಜೋನ್ಸನ್ ಡಿ ಅಲ್ಮೆಡಾ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಮೇಬಲ್ ಡಿ ಅಲ್ಮೇಡಾ, ಹಾಗೂ ನಿರ್ದೇಶಕರುಗಳು ಉಪಸ್ಥಿತರಿದ್ದರು.
ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ.ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹಾಗೂ ಅನಿವಾಸಿ ಭಾರತೀಯ, ಪಿಲಾಥ್ರೋಪಿಸ್ಟ್ ಡಾ.ರೋನಾಲ್ಡ್ ಕೊಲಾಸೊ ಅವರ ಸಂದೇಶಗಳನ್ನು ವಾಚಿಸಲಾಯಿತು.
ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉಪಾಧ್ಯಕ್ಷರಾದ ಕಿರಣ್ ಮೆಲ್ವಿನ್ ಲೋಬೊ ಸ್ವಾಗತಿಸಿದರು. ನಿರ್ದೇಶಕರಾದ ವಿಲ್ಸನ್ ಡಿಸೋಜ ವಂದಿಸಿದರು. ಅಲ್ವಿನ್ ದಾಂತಿ ಕಾರ್ಯಕ್ರಮ ನಿರ್ವಹಿಸಿದರು.