ಬಂಟ್ವಾಳ, ಸೆ.22(DaijiworldNews/AA): "ಹಾಡು ಸಂತೋಷಕ್ಕೆ..ಕುಣಿದೂ.. ತಾಳಕ್ಕೆ .. ನಲಿದು...."ಎನ್ನುವ ಹಾಡು ಥಾಸೆ ಸ್ವರದಲ್ಲಿ ಮೊಳಗುತ್ತಿದ್ದರೆ, ದಕ್ಷಿಣಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಮಕ್ಕಳ ಜೊತೆ ಮಕ್ಕಳಾಗಿ ಕೆಸರಿನಲ್ಲಿ ಕುಣಿಯುತ್ತಿದ್ದರು. ಇಡೀ ಗ್ರಾಮದ ಜನತೆ ಈ ಅಚ್ಚರಿಯ ದೃಶ್ಯವನ್ನು ಕಂಡು ಬೆರಗಾಗಿ, ತಾವೂ ಸಂಭ್ರಮಿಸಿದರು.
ಹೌದು ಈ ಅಪೂರ್ವ ದೃಶ್ಯ ಕಂಡುಬಂದದ್ದು ಅನಂತಾಡಿ ಗ್ರಾಮದಲ್ಲಿ. ಇಲ್ಲಿನ ನವ ಭಾರತ್ ಯುವಕ ಸಂಘದ ವತಿಯಿಂದ ಪಡಿಪಿರೆ ಗದ್ದೆಯಲ್ಲಿ ಜರಗಿದ 6ನೇ ವರ್ಷದ ಕೆಸರ್ದ ಕಂಡೊಡು ಕುಸಲ್ದ ಗೊಬ್ಬುಲು ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಲ್ಲೈ ಮುಗಿಲನ್ ಅವರು, ಮಕ್ಕಳೊಂದಿಗೆ ಮಗುವಾಗಿ ಬೆರೆತರು.
ಇದೇ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿಯವರು, ರೈತ ದೇಶದ ಬೆನ್ನೆಲುಬು ಸಂತೋಷದಿಂದಿದ್ದರೆ ಇಡೀ ಜಗತ್ತೇ ಸಂತಸ ಪಡುವುದು, ಪ್ರತಿಯೊಬ್ಬರ ಆಹಾರವನ್ನು ಪೂರೈಸಿ ಎಲ್ಲರ ಹಸಿವು ನೀಗಿಸುವ ರೈತ ಯಾವಾಗಲೂ ಸಂತೋಷವಾಗಿರಬೇಕು. ಜಿಲ್ಲೆಯ ಹವಾಮಾನದ ಎಡರು ತೊಡರುಗಳನ್ನು ದಾಟಿ ರೈತ ಬದುಕಬೇಕಾಗುತ್ತದೆ. ಈ ನೆಲದ ಸಂಸ್ಕೃತಿಯು ಬೆಳೆದು ಬಂದಿರುವುದು ಗದ್ದೆಗಳಿಂದ ಎಂದವರು ಹೇಳಿದರು.
ಜಿಲ್ಲಾಧಿಕಾರಿಯವರ ಜೊತೆಗೆ ಅವರ ಪತ್ನಿ, ಮಗು ಕೂಡ ಕೆಸರಿನಲ್ಲೂ ಗ್ರಾಮದ ಮಕ್ಕಳ ಜೊತೆಗೂಡಿ ಸಂತಸಪಟ್ಟ ರೀತಿ ಕಂಡು ಊರೇ ಸಂಭ್ರಮಿಸಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಅನೀಶ್ ಅಶ್ವತ್ತಾಡಿ ವಹಿಸಿದ್ದರು.
ಕಾರ್ಯಕ್ರಮದ ಧ್ವಜಾರೋಹಣವನ್ನು ಡಾಕ್ಟರ್ ರೂಪಲತಾ ಕೊಂಗಲಾಯಿ ನೆರವೇರಿಸಿ, ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಲಯನ್ಸ್ ಕ್ಲಬ್ ಮಾಣಿ ವಲಯ ಅಧ್ಯಕ್ಷರಾದ ರಾಮ್ ಕಿಶಾನ್ ರೈ ಮಾಡಿದರು. ಕ್ರೀಡಾಕೂಟದ ಕೆಸರುಗದ್ದೆಯ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರ ಸಂಘದ ಮಾಜಿ ಅಧ್ಯಕ್ಷರಾದ ಸಂಜೀವ ಪೂಜಾರಿ ಹಾಗೂ ವಿಠಲ ಕೋಟ್ಯಾನ್ ಪೊಯ್ಯೇ ನೆರವೇರಿಸಿದರು.
ವೇದಿಕೆಯಲ್ಲಿ ಮಾಣಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಿರಣ್ ಹೆಗ್ಡೆ, ನಿವೃತ್ತ ಶಿಕ್ಷಕ ರಾಮಣ್ಣ ಗೌಡ ಕೋಂಗಲಾಯಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ನಾರ್ಶ ಮುಖ್ಯ ಶಿಕ್ಷಕ ಗೋಪಾಲಕೃಷ್ಣ ನೆರಳಕಟ್ಟೆ, ಸರಕಾರಿ ಪದವಿ ಪೂರ್ವ ಕಾಲೇಜು ವಾಮದಪದವಿನ ರಾಧಾಕೃಷ್ಣ ಮೂಲ್ಯ, ಮಲ್ಲರಾಯ ದೈವ ಪರಿಚರಕರುಗಳಾದ ರಾಮಣ್ಣ ಗೌಡ, ಬಾಲಪ್ಪ ಮಡಿವಾಳ, ಲಕ್ಷ್ಮಣ ಪೂಜಾರಿ ಬಾಕಿಲ, ಪದ್ಮನಾಭ ಪೂಜಾರಿ ಈಡೆಮುಂಡೆವು ಮೊದಲಾದವರು ಉಪಸ್ಥಿತರಿದ್ದರು.
ಕೆಸರು ಗದ್ದೆಯಲ್ಲಿ ಮಕ್ಕಳಿಗೆ,ಮಹಿಳೆಯರಿಗೆ, ಪುರುಷರಿಗೆ, ವಿವಿಧ ಕ್ರೀಡಾಕೂಟಗಳನ್ನು ನಡೆಸಲಾಯಿತು.ಹಾಗೂ ಈ ಸಂದರ್ಭದಲ್ಲಿ ತುಳುವ ಸಂಸ್ಕೃತಿಯ ಚಾಪೆ ನೆಯುದು, ಬುಟ್ಟಿ ನೆಯ್ಯುವುದು, ಮುಟ್ಟಾಲೆ ಕಟ್ಟುವುದು, ತೆಂಗಿನಗರಿ ನೆಯ್ಯುವುದು, ಅಕ್ಕಿ ಮುಡಿ ಕಟ್ಟುವ ಪ್ರಾತ್ಯಕ್ಷತೆ ನಡೆಸಲಾಯಿತು.
ಯತೀಶ್ ಪೂಂಜಾವ್ ಸ್ವಾಗತಿಸಿ, ವೆಂಕಟೇಶ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.