ಬಂಟ್ವಾಳ, ಮೇ28(Daijiworld News/SS): ತಾಲೂಕಿನ ಕರಿಯಂಗಳ ಗ್ರಾಮದ ಬಡಕಬೈಲು ಎಂಬಲ್ಲಿ ಚುನಾವಣಾ ವಿಜಯೋತ್ಸವ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಸಂದರ್ಭ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ವಿರುದ್ಧ ಅವಾಚ್ಯವಾಗಿ ನಿಂದಿಸಿ ಹಾಗೂ ಜೀವಬೆದರಿಕೆ ಒಡ್ಡಿದ ಆರೋಪದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸರು ಮತ್ತೆ ಮೂವರು ಸಂಘಪರಿವಾರದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳದ ನಿವಾಸಿಗಳಾದ ಸಂಜೀವ, ಪ್ರೀತಂ ಮತ್ತು ಕರುಣಾಕರ ಬಂಧಿತ ಆರೋಪಿಗಳು.
ಇದೀಗ ಬಂಧಿತರಾಗಿರುವ ಒಟ್ಟು 6 ಮಂದಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 23ರಂದು ಘಟನೆ ನಡೆದಿದ್ದು, ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಭಜರಂಗದಳದ ಕಾರ್ಯಕರ್ತರು ಸಂಜೆ ಬಂಟ್ವಾಳ ತಾಲೂಕು ಕರಿಯಂಗಳ ಗ್ರಾಮದ ಬಡಕಬೈಲು ಎಂಬಲ್ಲಿ ಗುಂಪಾಗಿ ಸಂಭ್ರಮಾಚರಣೆಯಲ್ಲಿ ತೊಡಗಿ ದೂರುದಾರ ಮಿಥುನ್ ರೈ ಅವರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದಿದ್ದು, ಜೀವ ಬೆದರಿಕೆ ಹಾಕಿ, ಸಾರ್ವಜನಿಕ ಸ್ಥಳದಲ್ಲಿ ಘೋಷಣೆ ಕೂಗುತ್ತಾ ಸಾರ್ವಜನಿಕ ಶಾಂತಿ ಭಂಗ, ಗುಂಪುಗಳ ಮಧ್ಯೆ ಘರ್ಷಣೆಯನ್ನು ಉಂಟು ಮಾಡಿದ್ದರು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ಗ್ರಾಮಾಂತರ ಠಾಣೆ ಎಸ್.ಐ. ಪ್ರಸನ್ನ ನೇತೃತ್ವದಲ್ಲಿ ಈ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ವಿಚಾರಕ್ಕೆ ಸಂಬಂಧಿಸಿ ಹಲವರ ವಿಚಾರಣೆ ನಡೆಯುತ್ತಿದೆ. ಪ್ರಕರಣದ ಕುರಿತು ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಮಿಥುನ್ ರೈ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ದೂರು ನೀಡಿದ್ದರು.