ಮಂಗಳೂರು,ಮೇ 29(Daijiworld News/MSP): ಬೋಳಾರದಲ್ಲಿ ನೆಲೆಸಿದ್ದ ಕಾರ್ಮಿಕ ದಂಪತಿಯ ಎಂಟು ತಿಂಗಳ ಮಗುವಿನ ಮೃತದೇಹ ನೇತ್ರಾವತಿ ನದಿ ದಡದಲ್ಲಿ ಮಂಗಳವಾರ ಮಧ್ಯಾಹ್ನ ಪತ್ತೆಯಾಗಿದ್ದು, ದುಷ್ಕರ್ಮಿಗಳು ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಕೊಪ್ಪಳ ಮೂಲದ ಜಿಲ್ಲೆಯವರಾಗಿದ್ದು ಕಳೆದ 15 ದಿನಗಳಿಂದ ನಗರದ ಬೋಳಾರದ ಎಂ–ಫಾರ್ ಕ್ಯಾಂಪ್ ಶೆಡ್ನಲ್ಲಿ ನೆಲೆಸಿರುವ ಲಕ್ಷ್ಮಣ ತೆಂಗಿನಹಾಳ ಮತ್ತು ರೂಪಾ ಎಂಬುವವರ ಮಗಳು ಮೌನಶ್ರೀ ಶವ ನದಿ ದಡದಲ್ಲಿ ಪತ್ತೆಯಾಗಿದೆ. ಮುಖದ ಮೇಲೆ ತರಚಿದ ಗಾಯಗಳಾಗಿದ್ದು, ಕೊಲೆ ಮಾಡಿ ಎಸೆದಿರುವ ಅನುಮಾನದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಲಕ್ಷ್ಮಣ ನಗರದಲ್ಲಿ ಕಟ್ಟಡವೊಂದರ ನಿರ್ಮಾಣದಲ್ಲಿ ಕೂಲಿ ಕಾರ್ಮಿಕ. ಸೋಮವಾರ ಅನಾರೋಗ್ಯದ ಕಾರಣದಿಂದ ಕೆಲಸಕ್ಕೆ ಹೋಗಿರಲಿಲ್ಲ. ಪತ್ನಿ ರೂಪಾ ಮಗುವನ್ನು ಮನೆಯಲ್ಲೇ ಬಿಟ್ಟು ಬೆಳಿಗ್ಗೆ 8 ಗಂಟೆಗೆ ಕೆಲಸಕ್ಕೆ ಹೋಗಿದ್ದರು. 11.45ಕ್ಕೆ ಮಗುವನ್ನು ಜೋಳಿಗೆಯಲ್ಲಿ ಮಲಗಿಸಿ ಹೊರಗಡೆ ಹೋಗಿದ್ದು, ಮಧ್ಯಾಹ್ನ 12.15ಕ್ಕೆ ವಾಪಸು ಬರುವಷ್ಟರಲ್ಲಿ ಮಗು ನಾಪತ್ತೆಯಾಗಿತ್ತು ಎಂದು ಲಕ್ಷ್ಮಣ ಪತ್ನಿಯಲ್ಲಿ ತಿಳಿಸಿದ್ದ.