ಮಂಗಳೂರು,ಮೇ 29(Daijiworld News/MSP): ಕುವೈತ್'ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ದಕ್ಷಿಣ ಕನ್ನಡದ 34 ಯುವಕರಿಗೆ ಉದ್ಯೋಗದ ಭರವಸೆ ನೀಡಿ , ಮಂಗಳೂರಿನಿಂದ ಕಳುಹಿಸಿ ಕೊಟ್ಟಿದ್ದ ಏಜೆನ್ಸಿ ಮಾಣಿಕ್ಯ ಅಸೋಸಿಯೇಟ್ಸ್ ವಿರುದ್ದ ಮಂಗಳೂರು ಪೊಲೀಸರು ಮಂಗಳವಾರ ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ. ವಿದೇಶಗಳಲ್ಲಿ ಉದ್ಯೋಗಿಗಳಿಗೆ ನೇಮಕಾತಿ ಮಾಡುವ ಏಜೆನ್ಸಿಗಳು ಎಮಿಗ್ರೇಷನ್ ಕಾಯ್ದೆಯನ್ವಯ ಲೈಸನ್ಸ್ ಹೊಂದಿರಬೇಕು. ಆದರೆ ಮಂಗಳೂರಿನ ಈ ಮಾಣಿಕ್ಯ ಏಜೆನ್ಸಿ ಲೈಸನ್ಸ್ ಹೊಂದಿಲ್ಲ ಎನ್ನುವುದು ತನಿಖೆ ವೇಳೆ ಕಂಡುಬಂದಿದೆ.
ಜತೆಗೆ ಈ ಏಜೆನ್ಸಿ ವಿರುದ್ದ ಕುವೈತ್ ನಲ್ಲಿ ಅತಂತ್ರರಾಗಿರುವ ಸ್ಥಿತಿಯಲ್ಲಿ ಇರುವ ಯುವಕರ ಪರವಾಗಿ ಸಂಬಂಧಿಕರು ಕೂಡಾ ವಂಚನೆ ಆರೋಪದ ಮೇರೆ ದೂರು ನೀಡಿದ್ದಾರೆ.
ಘಟನೆ ಏನಿದು?
ಕುವೈತ್ ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದ ಮಾಣಿಕ್ಯ ಅಸೋಸಿಯೇಟ್ಸ್ ಪ್ಲೇಸ್ ಮೆಂಟ್ ಕಂಪೆನಿಯ ಪ್ರಸಾದ್ ಶೆಟ್ಟಿ ಎಂಬಾತ ಪ್ರತಿಯೊಬ್ಬರಿಂದ 65 ಸಾವಿರ ರೂಪಾಯಿ ವಸೂಲಿ ಮಾಡಿದ್ದಾನೆ. ಆದರೆ, ಇದನ್ನು ನಂಬಿ ಕುವೈತ್ ಗೆ ತೆರಳಿದ್ದ ಯುವಕರು ಮಾತ್ರ ಸರಿಯಾದ ಕೆಲಸ ದೊರೆಯದೆ ಕಳೆದ 6 ತಿಂಗಳಿಂದ ಪರದಾಟ ನಡೆಸಿದ್ದಾರೆ. ಊಟಕ್ಕೂ ಗತಿಯಿಲ್ಲದೇ ತೀರಾ ಸಂಕಷ್ಟ ಎದುರಿಸುತ್ತಿದ್ದಾರೆ. ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಸಂತ್ರಸ್ತರು ಮಂಗಳೂರಿನ ಶಾಸಕರು ಸೇರಿದಂತೆ ಜನತೆ ಸಹಾಯ ಮಾಡಬೇಕೆಂದು ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು