ಬೆಳ್ತಂಗಡಿ ನ 29: ನಿಯಂತ್ರಣ ತಪ್ಪಿ ಅಕ್ಕಿ ಮೂಟೆಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಉರುಳಿಬಿದ್ದ ಘಟನೆ ನ 27 ರ ಸೋಮವಾರ ರಾತ್ರಿ ಚಾರ್ಮಾಡಿಯ ಸುಣ್ಣದಗೂಡು ಎಂಬಲ್ಲಿ ನಡೆದಿದೆ. ಈ ವೇಳೆ ಅಕ್ಕಿ ಮೂಟೆಗಳೆಲ್ಲ ಚೆಲ್ಲಾಪಿಲ್ಲಿಯಾಗಿದ್ದವು. ಕೂಡಲೇ ಲಾರಿ ಚಾಲಕ ಇನ್ನೊಂದು ಲಾರಿಯನ್ನು ತರಿಸಿ ಬಿದ್ದ ಮೂಟೆಗಳನ್ನು ಲೋಡ್ ಮಾಡಲು ತೊಡಗಿದ್ದ.ಈ ಸಂದರ್ಭ ಸನಿಹದ ಕೆಲವು ಯುವಕರಿಗೆ ಮಾಹಿತಿ ತಿಳಿದು ನೋಡಲು ಬಂದಿದ್ದಾರೆ. ಯುವಕರಿಗೆ ಇದು ಅಕ್ರಮ ಅಕ್ಕಿ ಎಂದು ಅನುಮಾನ ಬಂದು ಕೂಡಲೇ ಎಸ್ಪಿಯವರಿಗೆ ಇದು ಪಡಿತರ ಅಕ್ಕಿ ಇರುವ ರೀತಿಯಲ್ಲಿ ಕಂಡು ಬರುತ್ತಿದೆ ಎಂದು ದೂರು ನೀಡಿದ್ದಾರೆ.
ಎಸ್ಪಿ ಅವರ ಸೂಚನೆ ಮೇರೆಗೆ ಧರ್ಮಸ್ಥಳ ಠಾಣೆಯ ಪೋಲಿಸ್ ಸಿಬ್ಬಂದಿಗಳು ತಡವಾಗಿಯಾದರೂ ಸ್ಥಳಕ್ಕೆ ಬಂದಿದ್ದಾರೆ. ಬಂದ ಕೂಡಲೇ ಅಲ್ಲಿಂದ ತರುಣರನ್ನು ಚದುರಿಸಲು ಲಾಠಿ ಪ್ರಹಾರ ಮಾಡಿದ್ದಾರೆ. ಬಳಿಕ ಪರಿಶೀಲನೆ ನಡೆಸಿ ಲಾರಿ ಹಾಗೂ ಅಕ್ಕಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ತಪಾಸಣೆಯ ವೇಳೆ ಚಿಕ್ಕಮಗಳೂರಿನ ಶ್ರೀ ಲಕ್ಷ್ಮೀ ವೆಂಕಟೇಶ್ವರ ರೈಸ್ ಮಿಲ್ನ ಬಿಲ್ ಸಿಕ್ಕಿದೆ. ಬಿಲ್ ನೋಡಿದಾಗ ಅದರಲ್ಲಿ ಯಾವುದೇ ಮೊಹರು ಇಲ್ಲದಿರುವುದು ಕಂಡು ಬಂದಿದೆ. ಅಲ್ಲದೆ ಮೊತ್ತೊಂದು ರಶೀದಿ ಚಿಕ್ಕಮಗಳೂರಿನ ಎಪಿಎಂಸಿಯದ್ದಾಗಿದ್ದು ಇದರಲ್ಲಿ ಪ್ಯಾಡಿ (ಭತ್ತ) ಎಂದು ನಮೂದಿಸಲಾಗಿದೆ. ಅಲ್ಲದೆ ಅಕ್ಕಿಮೂಟೆಗಳು ಯಂತ್ರದ ಮೂಲಕ ಪ್ಯಾಕಿಂಗ್ ಮಾಡದೆ ಸಾಮಾನ್ಯ ಹಗ್ಗದ ಮೂಲಕ ಜುಟ್ಟು ಕಟ್ಟುವಂತೆ ಕಟ್ಟಲಾಗಿತ್ತು. ಹೀಗಾಗಿ ಈ ಅಕ್ಕಿ ಮೂಟೆಗಳು ಅಕ್ರಮವಾಗಿ ಸಾಗಾಟವಾಗುತ್ತಿದ್ದವು ಎಂಬ ಅನುಮಾನ ಹುಟ್ಟು ಹಾಕಿದೆ.
ಒಟ್ಟಾರೆ ರಸೀದಿಗಳಲ್ಲಿ ಮೊಹರು, ಸಹಿಗಳಾಗಲಿ ಇಲ್ಲದಿರುವುದರಿಂದ ಸರಕಾರದ ಅನ್ನಭಾಗ್ಯ ಯೋಜನೆಯ ಅಕ್ಕಿ ಇದಾಗಿರಬಹುದೇ ಎಂದು ನಾಗರಿಕರಲ್ಲಿ ಸಂಶಯ ಉಂಟು ಮಾಡಿದೆ. ಪೋಲಿಸರು ಈ ಬಗ್ಗೆ ಕೂಲಂಕುಷ ತನಿಖೆ ನಡೆಸಿದಲ್ಲಿ ಸರಿಯಾದ ವಿಚಾರ ಹೊರಗೆ ಬರಲಿದೆ.