ಮೂಡುಬಿದಿರೆ, ಮೇ 29(Daijiworld News/MSP): ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಯೋರ್ವರ ಮನೆ ಮುಂದೆ ತಲೆಕೂದಲು ಜಡೆಯ ಪತ್ತೆಯಾಗಿದ್ದು, ವಾಮಾಚಾರ ನಡೆದಿರಬಹುದೇ? ಎನ್ನುವ ಸಂಶಯ ಕೇಳಿಬರುತ್ತಿದೆ.
ಪ್ರಸ್ತುತ ಪುರಸಭಾ ಸದಸ್ಯ, ಮೂಡಾದ ಮಾಜಿ ಅಧ್ಯಕ್ಷ ಸುರೇಶ್ ಕೋಟ್ಯಾನ್ ಮನೆ ಮುಂದೆ ಎರಡು ಬಾರಿ ಕೂದಲ ಜಡೆ ಪತ್ತೆಯಾಗಿದೆ ಎನ್ನಲಾಗಿದೆ. ಇವರು ವಾರ್ಡ್ ೨ಂರಲ್ಲಿ ಸ್ಪರ್ಧಿಸುತ್ತಿದ್ದು, ಜಡೆಯ ಸುದ್ದಿ ಮತ್ತಷ್ಟು ವೇಗ ಪಡೆದಿದೆ. ಕಳೆದ ಮೂರು-ನಾಲ್ಕು ದಿನಗಳ ಹಿಂದೆ ಘಟನೆ ನಡೆದಿದೆ ಎನ್ನಲಾಗಿದ್ದು, ಅದಕ್ಕಿಂತಲೂ ಮೂರು ದಿನಗಳ ಹಿಂದೆ ಇಂತಹದ್ದೇ ಇನ್ನೊಂದು ಜಡೆ ಇವರ ಮನೆಮುಂದೆ ಪ್ರತ್ಯೆಕ್ಷವಾಗಿದೆಯಂತೆ.ಒಂದು ಅಡಿಗಿಂತಲೂ ಉದ್ದವಿರುವ ಕೂದಲುಗಳ ಜಡೆ ಮುಂಜಾನೆ ಇವರ ಬಾಗಿಲ ಎದುರು ಪತ್ತೆಯಾಗಿದೆಯಂತೆ. ಅದನ್ನು ಮನೆಮಂದಿ ಸುಟ್ಟು ಹಾಕಿದ್ದು, ಈ ಬಗ್ಗೆ ಯಾವುದೇ ದೂರನ್ನು ನೀಡಿಲ್ಲ. ಅಷ್ಟಕ್ಕೂ ಈ ಜಡೆಯ ಜೊತೆ ಅಥರ್ವಣ ಪ್ರಯೋಗದ ಇತರ ಯಾವುದೇ ಪರಿಕರಗಳು ಪತ್ತೆಯಾಗದಿರುವುದರಿಂದ ಇದನ್ನು ಮಾಟ ಎಂದು ನೇರವಾಗಿ ಹೇಳುವಂತಿಲ್ಲ.
ಮನೆಮಂದಿ ಇದೊಂದು ಮಾಟವಾಗಿರುವ ಸಾಧ್ಯತೆ ಇದೆ ಎಂಬ ಅನುಮಾನ ವ್ಯಕ್ತಪಡಿಸಿದ್ದು, ಹಲವು ಊಹಾಪೋಹಗಳಿಗೂ ಎಡೆ ಮಾಡಿಕೊಟ್ಟಿದೆ. ಜಡೆಯ ಕೂದಲುಗಳು ನೈಜ್ಯ ಕೂದಲಿನ ಹೋಲಿಕೆಯಲ್ಲಿದ್ದು, ಅರೆಬರೆ ಬಿಳುಪಾದಂತಿದೆ. ಆದರೆ ವಿರೋಧ ಪಕ್ಷದವರು ಜಡೆಗೆ ಬೇರೆಯೇ ಕಥೆ ಹೇಳುತ್ತಿದ್ದಾರೆ.