ಮಂಗಳೂರು,ಮೇ 29(Daijiworld News/MSP): ಮಂಗಳೂರಿಗೆ ಡೆಂಗ್ಯೂ ಮಹಾಮಾರಿ ಮತ್ತೆ ಕಾಲಿಟ್ಟಿದ್ದು ನಗರದ ಮಹಾಕಾಳಿಪಡ್ಪು ರೈಲ್ವೆ ಗೇಟ್ ಪ್ರದೇಶದ ಆಸುಪಾಸಿನಲ್ಲಿ ಸುಮಾರು 14 ಮಂದಿಯಲ್ಲಿ ಶಂಕಿತ ಪ್ರಕರಣ ಗುರುತಿಸಲಾಗಿದ್ದು ಈ ಪೈಕಿ ನಾಲ್ವರಲ್ಲಿ ಡೆಂಗ್ಯೂ ದೃಢಪಟ್ಟಿದೆ.
ಇದಲ್ಲದೇ ನಗರದ ಜೆಪ್ಪು, ಮಾರ್ನಮಿಕಟ್ಟೆ ಪರಿಸರದಲ್ಲಿ ಕೆಲವೆಡೆ ಶಂಕಿತ ಪ್ರಕರಣಗಳು ಇರುವ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ದೊರಕಿದೆ. ಮಳೆಗಾಲ ಪ್ರಾರಂಭವಾಯಿತೆಂದರೆ ಮಂಗಳೂರಿಗೆ ಡೆಂಗ್ಯೂ ತಗುಲುತ್ತದೆ. ಆದರೆ ಈ ಬಾರಿ ಡೆಂಗ್ಯೂ ಮಳೆಗಾಲದ ಮೊದಲೇ ಕಾಣಿಸಿಕೊಂಡಿದೆ. ನಗರದಲ್ಲಿ ಅಲ್ಲೊಂದು ಇಲ್ಲೊಂದು ಡೆಂಗ್ಯೂ ಪ್ರಕರಣ ಕಂಡುಬರುತ್ತಲೇ ಇದೆ. ಮಳೆ ನೀರು ಅಲ್ಲಲ್ಲಿ ನಿಂತು ಸೊಳ್ಳೆ ಉತ್ಪತ್ತಿಗೆ ಸುಲಭವಾಗುತ್ತಿರುವುದರಿಂದ ಮತ್ತು ಕೊಳಚೆ ನೀರು ನಿಲ್ಲುವುದರಿಂದ ಸೊಳ್ಳೆ ಸಂತಾನ ಹೆಚ್ಚುತ್ತಿದೆ.
ಕಳೆದ ಐದು ತಿಂಗಳಲ್ಲಿ 170 ಎಚ್1ಎನ್1 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು ಇದರಲ್ಲಿ ಒಂದು ಸಾವು ಸಂಭವಿಸಿದೆ. ಇನ್ನು ಉಡುಪಿಯಲ್ಲೂ ಇದರ ಆತಂಕ ಮುಂದುವರಿದಿದೆ. ಇಲಾಖೆಯ ಮಾಹಿತಿ ಪ್ರಕಾರ, ಈ ವರ್ಷ ಉಡುಪಿಯಲ್ಲಿ 306 ಮಂದಿಗೆ ಎಚ್1ಎನ್1 ಸೋಂಕು ತಗುಲಿದ್ದು ಇದರಲ್ಲಿ 8 ಮಂದಿ ಮೃತಪಟ್ಟಿದ್ದಾರೆ.