ಕೊಲ್ಲೂರು, ಮೇ29(Daijiworld News/SS): ಕೊಲ್ಲೂರು ಸಹಿತ ನದಿಯ ಆಸುಪಾಸಿನ ಊರುಗಳು ನೀರಿಲ್ಲದೆ ಬಸವಳಿದಿವೆ. ಕೊಲ್ಲೂರು ಗ್ರಾಮದ ಹೆಗ್ಡೆಹಕ್ಲು, ಕಲ್ಯಾಣಿ ಗುಡ್ಡೆಯಲ್ಲಿ ಬಾವಿಗಳು ಕೂಡ ಬರಿದಾಗಿದ್ದು ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ.
ಸೌಪರ್ಣಿಕಾ ನದಿ ನೀರು ಬತ್ತಿ ಹೋದ ಪ್ರಯುಕ್ತ ಈ ಭಾಗದ ಬಹುತೇಕ ಕಡೆಗಳಲ್ಲಿ ನೀರಿನ ಕ್ಷಾಮ ಮತ್ತಷ್ಟು ಬಿಗಡಾಯಿಸಿದ್ದು, ದುಬಾರಿ ಬೆಲೆಗೆ ನೀರು ಖರೀದಿಸಬೇಕಾಗಿದೆ. ಸೌಪರ್ಣಿಕಾ ನದಿ ಸಹಿತ ಬೆಳ್ಕಲ್ ತೀರ್ಥ ಪ್ರದೇಶ ನೀರಿಲ್ಲದೆ ಬರಿದಾಗಿದೆ. ಸೌಪರ್ಣಿಕ ಸ್ನಾನ ಘಟ್ಟದಲ್ಲಿ ಇರುವ ಒಂದಿಷ್ಟು ನೀರು ಮೂರು ನಾಲ್ಕು ದಿನಗಳ ಬಳಕೆಗೆ ಮಾತ್ರ ಸಾಲುವಂತಿದ್ದು, ನೀರಿನ ತೀವ್ರ ಅಭಾವವಾಗಿದೆ.
2000 ಲೀ. ನೀರಿಗೆ ರೂ. 600 ಇದ್ದು, ಹಲವಾರು ವಸತಿ ಗೃಹಗಳು, ಹೊಟೇಲುಗಳಿಗೆ ಈಗ ಟ್ಯಾಂಕರ್ ನೀರೇ ಗತಿಯಾಗಿದೆ. ಹೊಟೇಲ್ಲೊಂದಕ್ಕೆ ಪ್ರತಿದಿನ ಕನಿಷ್ಠ 2000 ಲೀ. ನೀರು ಬೇಕಾಗಿದ್ದು, ಖಾಸಗಿಯವರಿಂದ ತರಿಸಿಕೊಳ್ಳುತ್ತಿದ್ದಾರೆ.
ಕೊಡಚಾದ್ರಿ ಬೆಟ್ಟದಲ್ಲಿರುವ ನಾನಾ ರೀತಿಯ ಔಷಧೀಯ ಗಿಡಗಳು ನೀರಿಲ್ಲದೇ ನಾಶವಾಗುತ್ತಿದೆ. ಶ್ರೀ ಮೂಕಾಂಬಿಕಾ ದೇಗುಲ ಸಹಿತ ಇಲ್ಲಿನ ಸುಮಾರು 45 ಖಾಸಗಿ ವಸತಿ ಗೃಹಗಳಿಗೆ ನೀರಿಲ್ಲ. ಕೆಲವೊಂದು ಮನೆಗಳಿಂದ ದುಬಾರಿ ಬೆಲೆ ತೆತ್ತು ನೀರು ಸಂಗ್ರಹಿಸಬೇಕಾದ ಅನಿವಾರ್ಯ ಸ್ಥಿತಿ ಬಂದಿದೆ.