ಸುರತ್ಕಲ್, 29 : ಇಲ್ಲಿ ನಡೆಯುವ ವಾರದ ಸಂತೆಯಲ್ಲಿ ಮೊಬೈಲ್ ಕಳ್ಳರ ಹಾವಳಿ ಹೆಚ್ಚಾಗಿದ್ದು, ಕಳೆದ ಭಾನುವಾರ ಒಂದೇ ದಿನದಲ್ಲಿ ಸುಮಾರು 10 ಮಂದಿಯ ಮೊಬೈಲ್ಗಳು ಕಳವಿಗೀಡದ ಘಟನೆ ಬೆಳಕಿಗೆ ಬಂದಿದೆ. ಮೊಬೈಲ್ ಚೋರರು ದುಬಾರಿ ಬೆಲೆಯ ಐಫೋನ್, ಸ್ಮಾರ್ಟ್ ಫೋನ್ಗಳೇ ಹೆಚ್ಚಾಗಿ ಎಗರಿಸುತ್ತಿದ್ದಾರೆ. ಕಾರಣ ಕಿಸೆಗಿಂತ ದೊಡ್ಡ ಗಾತ್ರದ ಪೋನ್ ಮೊಬೈಲ್ ಕಳ್ಳರ ಕಣ್ಣಿಗೂ ಕೈಗೂ ಸುಲಭವಾಗಿ ದೊರೆತುಬಿಡುತ್ತೆ. ಹೀಗಾಗಿ ಸುರತ್ಕಲ್ ಠಾಣೆಯಲ್ಲಿ ಮೊಬೈಲ್ ಕಳೆದುಕೊಂಡ ದೂರಿನ ಸಂಖ್ಯೆಯೂ ಏರುತ್ತಿದೆ. ಒಂದೆರಡು ಮೊಬೈಲ್ಗಳಾದರೆ ಸೈಬರ್ ಕ್ರೈಂ ಮೂಲಕ ಪತ್ತೆ ಹಚ್ಚಬಹುದಾದರೂ, ನೂರಾರು ದೂರು ದಾಖಲಾಗುತ್ತಿರುವುದರಿಂದ ಪತ್ತೆಹಚ್ಚುವುದು ಕಷ್ಟದ ಜತೆಗೆ ದೊಡ್ಡ ತಲೆ ನೋವಿನ ಕೆಲಸ. ಹೀಗಾಗಿ ಸದ್ಯ ಪೊಲೀಸರು ತಲೆಕೆಡಿಸಿಕೊಂಡು ಕೂತಿದ್ದಾರೆ.
ಇಲ್ಲಿ ಬುಧವಾರ ಮತ್ತು ರವಿವಾರವೂ ಸಂತೆಯಿದೆ. ಸಂಜೆಯಾಗುತ್ತಲೇ ಬೆಳಕು ಕಡಿಮೆಯಾಗಿ ವ್ಯಾಪಾರಿಗಳು ಸೋಲಾರ್ ಲೈಟ್ ಬಳಸಿ ವ್ಯಾಪಾರ ಮಾಡುತ್ತಾರೆ. ಗ್ರಾಹಕರು ಜನ ಸಂದಣಿ ನಡುವೆ ಕತ್ತಲೆಯಲ್ಲಿ ನಿಂತೇ ಖರೀದಿ ನಡೆಸುತ್ತಿರುವುದು ಕಳ್ಳರ ಪಾಲಿಗೆ ವರವಾಗಿ ಪರಿಣಮಿಸಿದೆ. ಪೊಲೀಸರ ವಾಹನ ಸುತ್ತಾಡಿದರೂ ಗ್ರಾಹಕರ ವೇಷಧಾರಿ ಕಳ್ಳರ ಮೇಲೆ ಪರಿಣಾಮ ಬೀರಿಲ್ಲ. ಹೀಗಾಗಿ ಸಂತೆಗೆ ಬರುವಾಗ ದುಬಾರಿ ಮೊಬೈಲ್ ತೆಗೆದುಕೊಂಡು ಬಾರದಿದ್ರೆ ಒಳ್ಳೆಯದು ಎಂಬ ಸಲಹೆ ಪೊಲೀಸರು ನೀಡುತ್ತಿದ್ದಾರೆ.