ಉಡುಪಿ, ಮೇ 29 (Daijiworld News/SM): ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣ ಹೆಚ್ಚಾಗುತ್ತಿದೆ. ಈ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆತಂಕ ವ್ಯಕ್ತಪಡಿಸಿದ್ದಾರೆ. ಶಿಶು ಮರಣಕ್ಕೆ ಸಂಬಂಧಿಸಿದಂತೆ ಯಾವ ಪ್ರದೇಶದಲ್ಲಿ ಹಾಗೂ ಯಾವ ಕಾರಣಕ್ಕೆ ಶಿಶುಮರಣ ಹೆಚ್ಚಾಗಿದೆ ಎಂಬುದರ ಬಗ್ಗೆ ಸಮಗ್ರ ವರದಿ ನೀಡಲು ಆರೋಗ್ಯ ಇಲಾಖೆಗೆ ಅವರು ಸೂಚನೆ ನೀಡಿದ್ದಾರೆ.
ಜಿಲ್ಲೆಯಲ್ಲಿ 2019ರ ಏಪ್ರಿಲ್ ತಿಂಗಳೊಂದರಲ್ಲೇ ಒಂದು ತಿಂಗಳ 7 ಶಿಶುಗಳು ವಿವಿಧ ಆರೋಗ್ಯ ಕಾರಣಗಳಿಂದ ಸಾವನ್ನಪ್ಪಿವೆ. ಈ ಪೈಕಿ 4 ಹೆಣ್ಣು ಶಿಶುಗಳು ಕೂಡಾ ಇರುವುದು ಗಂಭೀರ ವಿಚಾರವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಶಿಶು ಜನನ ಪ್ರಮಾಣ ಹೆಚ್ಚಾಗಿದೆ. 14760 ಇದ್ದ ಜನನ ಪ್ರಮಾಣ ಈ ಭಾರಿ ಮಾರ್ಚ್ 2018 ರಿಂದ ಎಪ್ರೀಲ್ 2019ರ ವರೆಗೆ 14,775 ತಪುಪಿದೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ ತಿಂಗಳಲ್ಲಿ ಜಿಲ್ಲೆಯಲ್ಲಿ ನಡೆದ ಶಿಶುಮರಣದ ಪ್ರತಿಯೊಂದು ಪ್ರಕರಣವನ್ನೂ ಕೂಲಂಕುಷ ಪರಿಶೀಲನೆಗೊಳಪಡಿಸಿ ಸಮಗ್ರವಾದ ವಿವರ ನೀಡಲು ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಕಳೆದ ಡಿಸೆಂಬರ್ ನಿಂದ ಇಲ್ಲಿಯವರೆಗೆ 7 ಮಹಿಳೆಯರು ಪ್ರಸವ ಸಂಬಂಧಿ ಕಾರಣಗಳಿಂದ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಹೆರಿಗೆ ಸಂದರ್ಭದಲ್ಲಿ ಎಲ್ಲಾ ತುರ್ತು ಸೌಲಭ್ಯಗಳು ಇರುವಂತೆ ಗಮನಹರಿಸಲು ಅವರು ಸೂಚಿಸಿದರು.
ಜಿಲ್ಲೆಯಲ್ಲಿ ಮಲೇರಿಯಾ, ಡೆಂಗ್ಯೂ ಪ್ರಕರಣಗಳ ಬಗ್ಗೆ ಮುಂಜಾಗೃತಾ ಕ್ರಮ ಕೈಗೊಳ್ಳುವ ಸಲುವಾಗಿ ಆಶಾ ಕಾರ್ಯಕರ್ತೆಯರು ತಿಂಗಳಿಗೊಮ್ಮೆ ಮನೆ ಮನೆಗೆ ಭೇಟಿ ನೀಡಿ ಮನೆಯ ಸುತ್ತಮುತ್ತ ಸ್ವಚ್ಚತೆಯನ್ನು ಕಾಯ್ದುಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಬೇಕು. ಶಿಕ್ಷಣ ಇಲಾಖೆ ವತಿಯಿಂದ ಕೂಡಾ ವಿದ್ಯಾರ್ಥಿಗಳಿಗೆ ಸ್ವಚ್ಚತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಅದರ ಜೊತೆಗೆ ಶಾಲೆಗಳಲ್ಲಿ ಮಕ್ಕಳಿಗೆ ಲಾರ್ವ ಪತ್ತೆ ಹಚ್ಚುವಿಕೆ ಬಗ್ಗೆ ಆರೋಗ್ಯ ಇಲಾಖೆ ವತಿಯಿಂದ ನೀಡಲಾಗುವ ಮಾಹಿತಿಯನ್ನು ಮಕ್ಕಳು ಪಡೆದು ತಮ್ಮ ಮನೆಗಳಲ್ಲಿ ವಾರಕ್ಕೊಂದು ಬಾರಿ ಕಾರ್ಯಗತಗೊಳಿಸಿ ಈ ಬಗ್ಗೆ ಮಾಹಿತಿ ನೀಡಲು ಹೆಪ್ಸಿಬಾ ರಾಣಿ ಸೂಚಿಸಿದರು.