ಹೈದರಾಬಾದ್ ನ 29 : ಇವಾಂಕ ಟ್ರಂಪ್ ಹಾಗೂ ಮೋದಿ ಜತೆಗಿನ ಭೋಜನ ಕೂಟ ಖಾಸಗಿ ವಾಹಿನಿಯೊಂದರಲ್ಲಿ ನೇರ ಪ್ರಸಾರವಾಗಿದೆ. ಇವಾಂಕಾ ಟ್ರಂಪ್ ಅವರ ಭಾರತ ಪ್ರವಾಸಕ್ಕೆ ಭಾರಿ ಭದ್ರತೆ ಕಲ್ಪಿಸಿರುವಂತೆಯೇ ಭದ್ರಕೋಟೆಯನ್ನು ಭೇದಿಸಿ ಈ ವಿಡೀಯೋ ಚಿತ್ರೀಕರಣವಾಗಿದ್ದು " ಭದ್ರತಾ ವೈಫಲ್ಯ"ಕ್ಕೆ ಕಾರಣವಾಗಿದೆ. ಇವಾಂಕಾ-ಪ್ರಧಾನಿ ಮೋದಿ ಹೈದರಾಬಾದ್ ನ ಫಲಕ್ನುಮಾ ಪ್ಯಾಲೆಸ್ ನಲ್ಲಿ ಆಯೋಜಿಸಲಾಗಿದ್ದ ಭೋಜನಕೂಟದಲ್ಲಿ ಭದ್ರತಾ ಕಾರಣದಿಂದಾಗಿ ಮಾಧ್ಯಮಗಳಿಗೆ ನಿಷೇದ ಹೇರಲಾಗಿತ್ತು ಹಾಗೂ ಸುರಕ್ಷತೆಗಾಗಿ ಎಲ್ಲೆಡೆ ಸಿ ಸಿ ಕ್ಯಾಮೆರಾ ಆಳವಡಿಸಿಲಾಗಿತ್ತು. ಮೂಲಗಳ ಮಾಹಿತಿ ಪ್ರಕಾರ ಈ ಎಲ್ಲ ಕ್ಯಾಮೆರಾಗಳ ನಿಯಂತ್ರಣ ಡಿಜಿಪಿ ಕಚೇರಿಯಲ್ಲಿತ್ತು .ಆದರೆ ಪೊಲೀಸ್ ನಿಯಂತ್ರಣ ಕಚೇರಿಗೆ ಆಗಮಿಸಿದ್ದ ಟಿವಿ ಚಾನೆಲ್ ನ ಪತ್ರಕರ್ತ ಅಲ್ಲಿ ಟಿವಿಗಳಲ್ಲಿ ಪ್ರಸಾರವಾಗುತ್ತಿದ್ದ ದೃಶ್ಯಾವಳಿಗಳನ್ನೇ ನೇರ ಪ್ರಸಾರ ಮಾಡತೊಡಗಿದ್ದಾನೆ ಎನ್ನಲಾಗಿದೆ.
ನೇರ ಪ್ರಸಾರವಾದ ಕೆಲವೇ ಕ್ಷಣಗಳಲ್ಲಿ ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿ ತಕ್ಷಣ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡುವ ಮೂಲಕ ನೇರ ಪ್ರಸಾರಕ್ಕೆ ಕತ್ತರಿ ಹಾಕಿದ್ದಾರೆ. ಬಳಿಕ ನೇರ ಪ್ರಸಾರ ಮಾಡಿದ ವಾಹಿನಿ ಮತ್ತು ಪತ್ರಕರ್ತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ .ಈ ಘಟನೆ ಮಾತ್ರ ಭದ್ರತೆಯ ಹೊಣೆ ಹೊತ್ತ ಅಧಿಕಾರಿಗಳನ್ನು ತಲೆತಗ್ಗಿಸುವಂತೆ ಮಾಡಿದೆ