ಮಂಗಳೂರು, ಮೇ 30 (Daijiworld News/MSP): ಐಪಿಎಲ್ ಕ್ರಿಕೆಟ್ ಮ್ಯಾಚ್ ಪ್ರಾರಂಭವಾಗುತ್ತಿದ್ದಂತೆ ಬೆಟ್ಟಿಂಗ್ನಲ್ಲಿ ತೊಡಗದಂತೆ ಮಂಗಳೂರು ಪೊಲೀಸ್ ಆಯುಕ್ತರು ಆರಂಭದಲ್ಲೇ ಎಚ್ಚರಿಕೆ ನೀಡಿದ್ದರು. ಆದರೆ ಅದ್ಯಾವೂದಕ್ಕೂ ಕ್ಯಾರೆ ಅನ್ನದ ದಂಧೆಕೋರರು ಬೆಟ್ಟಿಂಗ್ ದಂಧೆ ಜೋರಾಗಿಯೇ ನಡೆಸಲಾರಂಭಿಸಿದ್ದರು. ಆದರೆ ಬಳಿಕ ಪೊಲೀಸ್ ಇಲಾಖೆ ಕಂಡಕಂಡಲ್ಲಿ ದಾಳಿ ನಡೆಸಿ ಬೆಟ್ಟಿಂಗ್ ದಂಧೆಕೋರರಿಗೆ ಬಿಸಿಮುಟ್ಟಿಸಿದ್ದರು.
ಐಪಿಎಲ್ ಬೆಟ್ಟಿಂಗ್ನಲ್ಲಿ ತೊಡಗಿಕೊಳ್ಳದಂತೆ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಕೆಲ ದಿನಗಳ ಹಿಂದೆ ಟ್ವಿಟರ್ ಮೂಲಕ ಬುಕ್ಕಿಗಳಿಗೆ ಮುನ್ನೆಚ್ಚರಿಕೆ ಸಂದೇಶ ರವಾನಿಸಿದ್ದರು. ಪೊಲೀಸರು ಎಲ್ಲ ಕಡೆ ಬೆಟ್ಟಿಂಗ್ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಸಾರ್ವಜನಿಕರಿಗೆ ಮಾಹಿತಿ ಸಿಕ್ಕಿದರೆ ಪೊಲೀಸರಿಗೆ ತಿಳಿಸುವಂತೆ ಮನವಿ ಮಾಡಿದ್ದಾರೆ. ಇದೀಗ ವಿಶ್ವಕಪ್ ಪಂದ್ಯಾಟ ಪ್ರಾರಂಭವಾಗುವ ಮುಂಚೆ ಮತ್ತೊಮ್ಮೆ ಟ್ವೀಟ್ ಮಾಡಿರುವ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಈ ಬಾರಿ ಕಳೆದ ಐಪಿಎಲ್ ಸಂದರ್ಭ ಬೆಟ್ಟಿಂಗ್ ದಂಧೆ ವಿರುದ್ದ 18 ಪ್ರಕರಣ ದಾಖಲಾಗಿತ್ತು. ವಿಶ್ವಕಪ್ ಪಂದ್ಯಾಟ ಪ್ರಾರಂಭವಾಗಿದೆ ಬೆಟ್ಟಿಂಗ್ ದಂಧೆಕೋರರೇ ಹುಷಾರ್ ನಾವು ಈ ಬಾರಿ ಮತ್ತಷ್ಟು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ರವಾನಿಸಿದ್ದಾರೆ.
ಅಂದಹಾಗೆ 46 ದಿನಗಳ ಕಾಲ ನಡೆಯಲಿರುವ ವಿಶ್ವಕಪ್ ಏಕದಿನ ಕ್ರಿಕೆಟ್ ಕೂಟಕ್ಕೆ ಆಂಗ್ಲರ ನಾಡಿನಲ್ಲಿ ಗುರುವಾರ ವರ್ಣರಂಜಿತ ಚಾಲನೆ ದೊರೆಯಲಿದೆ.