ಉಡುಪಿ, ಸೆ.09: ಹಣದ ಆಸೆಯಿಂದ ತನ್ನ ಸ್ವಂತ ಚಿಕ್ಕಮ್ಮನನ್ನೇ ಹತ್ಯೆ ಮಾಡಿದ ಮತ್ತು ಆತನಿಗೆ ಸಹಕರಿಸಿದ ಆರೋಪಿಗೆ ಇಲ್ಲಿನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಕ್ಷೆ ವಿಧಿಸಿ ತೀರ್ಪು ನೀಡಿದೆ.
ಹರೀಶ್ ಪೂಜಾರಿ (37) ಮತ್ತು ಸಂತೋಷ್ ಪೂಜಾರಿ (36) ಜೀವಾವಧಿ ಶಿಕ್ಷೆಗೊಳಗಾದವರು. ಈ ಇಬ್ಬರು 2012ರಲ್ಲಿ ಶಕುಂತಲಾ ಎಂಬ ಮಹಿಳೆಯನ್ನು ಕೊಲೆಗೈದು ಆಕೆಯ ಚಿನ್ನಾಭರಣವನ್ನು ಲೂಟಿಗೈದಿದ್ದರು.
ಆಗಿನ ಪೊಲೀಸ್ ವೃತ್ತನಿರೀಕ್ಷಕರಾದ ಎಸ್ ವಿ ಗಿರೀಶ್ ಈ ಪ್ರಕರಣದ ತನಿಖೆಯನ್ನು ನಡೆಸಿದ್ದು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದ ಹರೀಶ್ ಪುಜಾರಿ ತನ್ನ ಚಿಕ್ಕಮ್ಮ ಶಕುಂತಲಾರನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದ್ದ. ಅದರಂತೆ 2012ರ ಜೂನ್ 24ರಂದು ತನ್ನ ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ಆಕೆಯ ಅಕ್ಕ ಜಯಂತಿಯವರ ಮೊಬೈಲ್ ನಂಬರ್ ಪಡೆದುಕೊಳ್ಳಲು ಹರೀಶ್ ಪುಜಾರಿ ಅಲ್ಲಿಗೆ ಆಗಮಿಸಿದ್ದ.
ಶಕುಂತಲಾ ಅವರು ಮೊಬೈಲ್ ನಲ್ಲಿ ನಂಬರ್ ಗಾಗಿ ಹುಡುಕುತ್ತಿದ್ದಾಗ ಹಿಂದಿನಿಂದ ಬಂದ ಸಂತೋಷ್ ಪೂಜಾರಿ ಆಕೆಯ ಕತ್ತನ್ನು ಬಿಗಿಯಾಗಿ ಹಿಡಿದ. ನಂತರ ಇಬ್ಬರೂ ಹಂತಕರು ಆಕೆಯನ್ನು ಕೋಣೆಯೊಳಗೆ ಎಳೆದೊಯ್ದು ಚಿನ್ನಾಭರಣದ ನೀಡುವಂತೆ ಸೂಚಿಸಿದರು. ಆಕೆ ನೀಡಲು ನಿರಾಕರಿಸಿದಾಗ ಆಕೆಯ ಕತ್ತನ್ನು ಆಕೆಯ ಚೂಡಿದಾರ್ ಶಾಲ್ ನಿಂದಲೇ ಗಟ್ಟಿಯಾಗಿ ಬಿಗಿದ ದುಷ್ಕರ್ಮಿಗಳು ಆಕೆಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ ನಂತರ ಚಿನ್ನ ಮತ್ತು ಎರಡು ಮೊಬೈಲ್ ಫೋನ್ ಗಳ ಜೊತೆಗೆ ಸ್ಥಳದಿಂದ ಪರಾರಿಯಾಗಿದ್ದರು.