ಮಂಗಳೂರು, ಮೇ 30 (Daijiworld News/MSP): ಕಡಲ ನಗರಿಯಲ್ಲಿ ಕಾಡುತ್ತಿರುವ ಬಿರು ಬೇಸಿಗೆಯ ಧಗೆಗೆ ಜನತೆ ದೇಹವನ್ನು ತಂಪಾಗಿಸಲು ಎಳೆನೀರು, ಜ್ಯೂಸ್ ಗಳಿಗೆ ಮಾರು ಹೋಗುತ್ತಿರುವುದು ಸಾಮಾನ್ಯ ..ಆದರೆ ದೇಹ ತಂಪಾದರೆ ಸಾಕೇ ? ವಾತಾವರಣವನ್ನು ತಂಪಾಗಿಸಬೇಕಲ್ಲವೇ ಇದೇ ಕಾಳಜಿಯೊಂದಿಗೆ ಜ್ಯೂಸ್ ಅಂಗಡಿಯೊಂದು ತನ್ನ ಗ್ರಾಹಕರಿಗೆ ಉಚಿತ ಸಸಿಗಳನ್ನು ವಿತರಿಸುತ್ತಿದೆ.
ಹೌದು ನಗರದ ಹಂಪನಕಟ್ಟೆಯಲ್ಲಿರುವ 'ಜ್ಯೂಸ್ ಜಂಕ್ಷನ್' ಆಹಾರ ಪ್ರೀಯರಿಗೆ ಇಷ್ಟವಾದ ಸ್ಥಳ. 28 ವರ್ಷಗಳ ಹಿಂದೆ ಆರಂಭವಾದ ಜ್ಯೂಸ್ ಜಂಕ್ಷನ್ ಸೇವೆಯ ಗುಣಮಟ್ಟದಿಂದಲೇ ತನ್ನ ಖ್ಯಾತಿಯನ್ನು ಉಳಿಸಿಕೊಂಡಿದೆ. ಇದೀಗ 'ಗೋ ಗ್ರೀನ್' ಗೆ ತನ್ನ ಬೆಂಬಲ ನೀಡಿ "ದೇಹ ಮಾತ್ರವಲ್ಲ ಪರಿಸರವನ್ನು ತಂಪಾಗಿಸಿ" ಎಂದು ಪ್ರಕೃತಿಯ ಕಾಳಜಿ ಮೆರೆದಿದೆ.
ಈ ಬಗ್ಗೆ ದಾಯ್ಜಿ ವಲ್ಡ್ ಗೆ ಜ್ಯೂಸ್ ಜಂಕ್ಷನ್ ನ ಮಾಲೀಕ ಅರುಣ್ ನಾಯ್ಕ್, "ಗೋ ಗ್ರೀನ್ ’ ಚಿಂತನೆಗೆ ನನ್ನ ಕೊಡುಗೆ ನೀಡಲು ಯೋಚಿಸಿದ್ದೆ. ಹೀಗಾಗಿ ಜ್ಯೂಸ್ ಜಂಕ್ಷನ್ ನ ಗ್ರಾಹಕರಿಗೆ ಸಸಿಗಳನ್ನು ವಿತರಿಸಲು ನಿರ್ಧರಿಸಿದ್ದೇನೆ, ನನ್ನ ಕಡೆಯಿಂದ ಏನನ್ನಾದರೂ ಸಮಾಜಕ್ಕೆ ಸಮರ್ಪಿಸಲು ಹಾಗೂ ಗೋ ಗ್ರೀನ್ ಚಿಂತನೆ ಕಡೆಗೆ ಜನರನ್ನು ಉತ್ತೇಜಿಸಲು ಸಸಿಗಳನ್ನು ವಿತರಿಸುವ ಸರಳ ವಿಧಾನವನ್ನು ಆಯ್ಕೆಮಾಡಿಕೊಂಡಿದ್ದೇನೆ".
"ನಾವು ಮುಂದಿನ 15 ದಿನಗಳವರೆಗೆ ಸಸಿ ವಿತರಣೆಯನ್ನು ಕಾರ್ಯಕ್ರಮವನ್ನು ಯೋಜಿಸುತ್ತಿದ್ದೇವೆ, ಮೇ 29 ನಮ್ಮ ಅಂಗಡಿಯ ಸ್ಥಾಪನೆಯ ದಿನ ಅಂದೇ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ. ಮೊದಲ ದಿನದಂದು ನಾನು 100 ಮಾವಿನ ಸಸಿಗಳನ್ನು ಗ್ರಾಹಕರಿಗೆ ವಿತರಿಸಿದ್ದೇವೆ. ಮುಂದಿನ ದಿನಗಳಲ್ಲಿ ವಿವಿಧ ತಳಿಯ ಹಣ್ಣಿನ ಸಸಿಗಳನ್ನು ವಿತರಿಸಲು ನಿರ್ಧರಿಸಿದ್ದೇನೆ "ಎಂದು ಹೇಳಿದ್ದಾರೆ.
ಜ್ಯೂಸ್ ಜಂಕ್ಷನ್ ನ ನೌಕರ ದಿನೇಶ್ ಪ್ರತಿಕ್ರಿಯಿಸಿ, " ಸಸಿಗಳನ್ನು ಉಚಿತವಾಗಿ ವಿತರಿಸುವ ಸುದ್ದಿ ಕೇಳಿ ಅನೇಕ ಗ್ರಾಹಕರು ಗಿಡಗಳನ್ನು ಪಡೆಯಲೆಂದೇ ಅಂಗಡಿಗಳಿಗೆ ಬಂದಿದ್ದಾರೆ. ನಮ್ಮ ಈ ಕೊಡುಗೆಗೆ ಗ್ರಾಹಕರು ಕೂಡಾ ಪ್ರೋತ್ಸಾಹಿಸುತ್ತಿದ್ದಾರೆ , "ಅವರು ವಿವರಿಸಿದರು