ಸುಬ್ರಹ್ಮಣ್ಯ, ಮೇ30(Daijiworld News/SS): ಇತಿಹಾಸ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸುತ್ತು ಪೌಳಿಯನ್ನು 14 ಕೋಟಿ ರೂ. ವೆಚ್ಚದಲ್ಲಿ ನವೀಕರಿಸಲು ಆಡಳಿತಾತ್ಮಕ ಅನುಮೋದನೆ ದೊರಕಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮಾಹಿತಿ ನೀಡಿದ್ದು, ಶ್ರೀ ದೇವಳದ ಸುತ್ತುಪೌಳಿಯನ್ನು ಸಂಪೂರ್ಣ ನವೀಕರಿಸಲಾಗುವುದು. ಅಲ್ಲದೆ ಕಾಮಗಾರಿಗೆ ಬೇಕಾದ ಮೊತ್ತವನ್ನು ದೇವಳದ ನಿಧಿಯಿಂದ ಭರಿಸಲಾಗುವುದು. ಕ್ಷೇತ್ರ ಸಂಪ್ರದಾಯ, ನಿಯಮ, ಧಾರ್ಮಿಕ ವಿಧಿ ವಿಧಾನಗಳಿಗೆ ತೊಂದರೆಯಾಗದಂತೆ ಶ್ರೀ ದೇವಳದ ಪ್ರಧಾನ ಅರ್ಚಕರು ಮತ್ತು ವಾಸ್ತುಶಿಲ್ಪಿಗಳು, ಆಗಮ ಪಂಡಿತರು ಸಲಹೆ ಮೇರೆಗೆ ಕಾಮಗಾರಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಆಡಳಿತ ಮಂಡಳಿ ಕಳುಹಿಸಿದ ನೀಲಿ ನಕಾಶೆ ಜಿಲ್ಲಾಧಿಕಾರಿಗಳಿಂದ ಅನುಮೋದನೆಗೊಂಡು ಸರಕಾರಕ್ಕೆ ಕಳುಹಿಸಲಾಗಿತ್ತು. ಕಾಮಗಾರಿಯ ಅಂದಾಜುಪಟ್ಟಿ ಹಾಗೂ ನಕ್ಷೆಗೆ ರಾಜ್ಯಮಟ್ಟದ ತಾಂತ್ರಿಕ ಸಲಹಾ ಮತ್ತು ಅಂದಾಜುಪಟ್ಟಿ ಪರಿಶೀಲನಾ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ದೊರಕಿದೆ. ಅಲ್ಲದೆ ಅಂದಾಜು ಮೊತ್ತವನ್ನು ಮಂಗಳೂರು ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರ ಕಚೇರಿಯಲ್ಲಿ ಠೇವಣಿ ಇರಿಸಿ ನಂತರ ತಾಂತ್ರಿಕ ಮಂಜೂರಾತಿ ನೀಡಿ ಕಾಮಗಾರಿ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದ್ದಾರೆ.