ಮಂಗಳೂರು, ನ 29: ಸ್ಕೇಟಿಂಗ್ ಪಟುಗಳಿಬ್ಬರು ಹೊಡೆದಾಡಿಕೊಂಡ ವೀಡಿಯೋ ಸಾಮಾಜಿಕ ತಾಲತಾಣದಲ್ಲಿ ವೈರಲ್ ಆಗಿದೆ. ಕಳೆದ ನವೆಂಬರ್ 26 ರಂದು ಮಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ 33ನೇ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಇಬ್ಬರು ಸ್ಕೇಟಿಂಗ್ ಪಟುಗಳು ಸ್ಕೇಟಿಂಗ್ ರಿಂಕ್ ನಲ್ಲೇ ಹಿಗ್ಗಾಮುಗ್ಗ ಹೊಡೆದಾಡಿಕೊಂಡಿದ್ದಾರೆ. ಮಂಗಳೂರಿನ ಹೊಯಿಗೆ ಬೈಲ್ ನಲ್ಲಿರುವ ಫ್ರಾನ್ಸಿಸ್ಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ಹೈಫೈ ಸ್ಕೇಟಿಂಗ್ ಕ್ಲಬ್ ಆಯೋಜಿಸಿದ್ದ ರಾಜ್ಯ ಮಟ್ಟದ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಡೆಯುತ್ತಿದ್ದ ವೇಳೆ ಈ ಹೊಡೆದಾಟ ನಡೆದಿದೆ.16 ವರ್ಷಕ್ಕಿಂತ ಮೇಲ್ಪಟ್ಟ ವಿಭಾಗದ ಫೈನಲ್ ಪಂದ್ಯ ನಡೆಯುತ್ತಿದ್ದು, ಬೆಂಗಳೂರಿನ ರಾಘವೇಂದ್ರ ಹಾಗೂ ಬೆಂಗಳೂರಿನ ಅಂಕಿತ್ ಎಂಬ ಸ್ಕೇಟರ್ ಗಳು ಫಿನಿಶ್ ಲೈನ್ ದಾಟುವ ಮೊದಲೇ ಉದ್ದೇಶ ಪೂರ್ವಕವಾಗಿಯೇ ಡಿಕ್ಕಿ ಹೊಡೆದು ಬಿದ್ದರು. ಬಿದ್ದ ತಕ್ಷಣ ಸ್ಕೇಟಿಂತ್ ಪಟು ರಾಘವೇಂದ್ರ ಇನ್ನೋರ್ವ ಸ್ಕೇಟಿಂಗ್ ಪಟು ಅಂಕಿತ್ ಗೆ ಹಿಗ್ಗಾಮುಗ್ಗ ಥಳಿಸಿದ್ದಾನೆ.ಬಳಿಕ ರೆಫ್ರಿಗಳು ಜಗಳವನ್ನು ಬಿಡಿಸಿದ್ದಾರೆ. ಈ ಸ್ಕೇಟಿಂಗ್ ಪಟುಗಳ ಹಲ್ಲೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸ್ಕೇಟಿಂಗ್ ನಲ್ಲೂ ಇಂತಹ ಘಟನೆಗಳು ನಡೆಯುತ್ತಾ ಈ ಮಟ್ಟಕ್ಕೆ ಸ್ಕೇಟಿಂಗ್ ಬಂದಿದೆಯಾ ಎಂದು ಚರ್ಚೆ ಆರಂಭಗೊಂಡಿದೆ. ಇನ್ನು ಕಳೆದ ವರ್ಷ ಇದೇ ಅಂಕಿತ್ ರಾಘವೇಂದ್ರನಿಗೆ ಹಲ್ಲೆ ನಡೆಸಿದ್ದು ಅದರ ರಿವೇಂಜ್ ನಲ್ಲಿ ಈ ಹಲ್ಲೆ ನಡೆದಿದೆ ಎನ್ನಲಾಗಿದೆ. ಕಳೆದ ವರ್ಷ ಹಲ್ಲೆ ನಡೆದಾಗ ರಾಜ್ಯ ಸ್ಕೇಟಿಂಗ್ ಯಾವುದೇ ಕ್ರಮ ಕೈಗೊಳ್ಳದೇ ಇರೋದು ಈ ಘಟನೆ ಮರುಕಳಿಸಲು ಕಾರಣ ಎಂಬ ಆರೋಪ ಕೇಳಿ ಬಂದಿದೆ. ಈ ಹಲ್ಲೆ ಪ್ರಕರಣದ ಬಗ್ಗೆ ಉರ್ವಾ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.