ಉಡುಪಿ, ನ 29: ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಶ್ರೀಪಾದರನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಬಿಂಬಿಸಿರುವ ಜೊತೆಗೆ ಅವರ ಭಾವಚಿತ್ರವನ್ನು ಚಪ್ಪಲಿಯಲ್ಲಿ ತುಳಿದು ಅವಮಾನಿಸಿರುವ ಆರೋಪಿಗಳನ್ನು ಬಂಧಿಸಬೇಕು ಎಂದು ಅನ್ಸಾರ್ ಅಹಮ್ಮದ್ ಉಡುಪಿ ನಗರ ಠಾಣೆಗೆ ದೂರು ನೀಡಿದ್ದಾರೆ.
ಐತಿಹಾಸಿಕ ಧರ್ಮ ಸಂಸದ್ನ ವೇಳೆ ಶ್ರೀಗಳು ಸಂವಿಧಾನ ವಿರೋಧಿಯಾಗಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಕೆಲ ದುಷ್ಕರ್ಮಿಗಳು ಶ್ರೀಪಾದರ ಭಾವಚಿತ್ರವನ್ನು ಕೆಳಗೆ ಹಾಕಿ ಚಪ್ಪಲಿಯಿಂದ ತುಳಿಯುವ ಚಿತ್ರಗಳನ್ನು ರಚಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ. ಈ ಮೂಲಕ ಶ್ರೀಗಳಿಗೆ ಅವಮಾನ ಮಾಡಿ ಕೃಷ್ಣ ನಗರಿ ಉಡುಪಿಯಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪೇಜಾವರ ಶ್ರೀಗಳ ಪ್ರಚೋದನಕಾರಿ ಭಾಷಣದ ವಿರುದ್ಧ ಈಗಾಗಲೇ ಕೆಲ ಸಂಘ ಸಂಸ್ಥೆಗಳು ಪ್ರತಿಭಟನೆ ಮಾಡುತ್ತಿದ್ದು, ಫೇಸ್ಬುಕ್, ವಾಟ್ಸ್ಯಾಪ್ನಲ್ಲಿ ಶ್ರೀಗಳ ವಿರುದ್ಧ ಪ್ರಚೋದನಾತ್ಮಕ, ನಿಂದನೀಯ ಬರಹ ಸಂದೇಶಗಳು ಹರಿದು ಬರುತ್ತಿದೆ. ಇದು ಶ್ರೀಪಾದರ ಚಾರಿತ್ರ್ಯಹರಣದ ಉದ್ದೇಶವಾಗಿದೆ ಎಂದು ದೂರಿನಲ್ಲಿದೆ.
ಶಾಂತಿ ಕದಡುವ ಹಾಗೂ ಅರಾಜಕತೆ ಸೃಷ್ಟಿಸಲು ಯತ್ನಿಸುವ ವ್ಯಕ್ತಿ, ಸಂಘಟನೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಂತಹ ಕೃತ್ಯದಲ್ಲಿ ತೊಡಗಿಸಿಕೊಳ್ಳುವವರನ್ನು ಕೂಡಲೇ ಬಂಧಿಸಿ ಸಾಮರಸ್ಯ ಕಾಪಾಡುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.
ಕಲಬುರ್ಗಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಪ್ರತಿಭಟನೆ ನಡೆಸಿದ್ದು, ಯುವಕನೊಬ್ಬ ಅನುಚಿತವಾಗಿ ವರ್ತಿಸಿ, ಶ್ರೀಗಳ ಚಿತ್ರಕ್ಕೆ ಚಪ್ಪಲಿಯಿಂದ ತುಳಿದಿರುವುದು ಇದೀಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.