ಬಂಟ್ವಾಳ, ಮೇ 31(Daijiworld News/MSP): ಯುವಕನೊರ್ವ ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಸಂದರ್ಭ ಮೂವರು ಸೇರಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಲೊರೆಟ್ಟೊ ಪದವು ಎಂಬಲ್ಲಿ ಗುರುವಾರ ರಾತ್ರಿ ವೇಳೆ ನಡೆದಿದೆ.
ನಿತಿನ್ ಪೂಜಾರಿ ಎಂಬವರು ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರ ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿತಿನ್ ಪೂಜಾರಿ ಮೂಲತಃ ಲೊರೆಟ್ಟೊ ಸಮೀಪದ ಪೆದಮಲೆಯಲ್ಲಿ ವಾಸವಾಗಿದ್ದರು. ಅದರೆ ಕೆಲವೊಂದು ಕಾರಣದಿಂದ ಇವರು ಮಾರ್ನಬೈಲು ಸಮೀಪದ ಬೊಳ್ಳಾಯಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು . ನಿತಿನ್ ವಿದೇಶದಲ್ಲಿ ಉದ್ಯೋಗ ದಲ್ಲಿದ್ದು ಮೂರು ತಿಂಗಳ ಹಿಂದೆ ಊರಿಗೆ ಆಗಮಿಸಿದ್ದರು. ಪೆದಮಲೆಯಲ್ಲಿರುವ ಜಾಗದಲ್ಲಿ ಮನೆ ನಿರ್ಮಾಣ ಹಾಗೂ ಬೊರೆವೆಲ್ ಕೊರೆಸುವ ಯೋಚನೆ ಮಾಡಿದ್ದು, ಈ ಕಾರಣಕ್ಕಾಗಿ ಇವರು ಸಂಜೆಯ ಸಂದರ್ಭ ತನ್ನ ಬುಲೆಟ್ ಬೈಕ್ ನಲ್ಲಿ ಪೆದಮಲೆ ಜಾಗದ ಕಡೆಗೆ ಹೋಗಿ ಬಳಿಕ ವಾಪಾಸು ಬರುವ ವೇಳೆ ಲೊರೆಟ್ಟೊ ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿ ವಿದೇಶದಲ್ಲಿರುವ ಅಣ್ಣನ ಜೊತೆ ಮೊಬೈಲ್ ಪೋನ್ ನಲ್ಲಿ ಮಾತನಾಡುತ್ತಿರುವಾಗ ಸ್ಥಳೀಯ ಆಂಗಡಿ ಮಾಲಕ ಪುರಸಭಾ ಸದಸ್ಯ ವಾಸುಪೂಜಾರಿ ಅವ್ಯಾಚ್ಚ ಶಬ್ದಗಳಿಂದ ಬೈದು ಅಲ್ಲಿಂದ ತೆರಳುವಂತೆ ಅವಾಜ್ ಹಾಕಿದ್ದರು.
ಅಲ್ಲಿಂದ ನಿತಿನ್ ಕೆಳಭಾಗಕ್ಕೆ ಬಂದು ಬೈಕ್ ನಿಲ್ಲಿಸಿ ಮತ್ತೆ ಅಣ್ಣನ ಜೊತೆ ಮಾತನಾಡುವ ಸಂದರ್ಭ ವಾಸು ಪೂಜಾರಿ ಇಬ್ಬರು ಮಕ್ಕಳಾದ ರಾಕೇಶ್ ಮತ್ತು ಚೇತನ್ ಅವರು ಆಕ್ಟೀವ್ ಹೊಂಡಾದಲ್ಲಿ ಬಂದು ಅದರಲ್ಲಿದ್ದ ರಾಡ್ ತೆಗೆದು ಹತ್ಯೆ ಮಾಡುವುದಾಗಿ ಬೆದರಿಸಿ ಏಕಾಏಕಿ ಮಾರಣಾಂತಿಕ ವಾಗಿ ಹಲ್ಲೆ ನಡೆಸಿದ್ದಾರೆ ಎಂದು ನಿತೀನ್ ದೂರಿನಲ್ಲಿ ವಿವರಿಸಿದ್ದಾರೆ
ರಾಜಕೀಯ ದ್ವೇಷದಿಂದ ಈ ಹಲ್ಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ನಿತಿನ್ ಈ ಹಿಂದೆ ವಾಸು ಪೂಜಾರಿಯವರ ತಂಡದ ಜೊತೆ ಗುರುತಿಸಿಕೊಂಡಿದ್ದು, ಇತ್ತೀಚೆಗೆ ತಾನೆ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದ ಎನ್ನಲಾಗಿದೆ.