ಮಂಗಳೂರು, ನ 29 : ಸುರತ್ಕಲ್ ಹಾಗೂ ಹೆಜಮಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಟೋಲ್ಗೇಟ್ಗಳನ್ನು ವಿಲೀನಗೊಳಿಸಲು ಶೀಘ್ರವೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ ಎಂದು ಲೋಕೋಪಯೋಗಿ ಸಚಿವ ಡಾ. ಎಚ್. ಸಿ. ಮಹಾದೇವಪ್ಪ ತಿಳಿಸಿದ್ದಾರೆ.
ರಾಜ್ಯ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಮಂಗಳೂರು ಉತ್ತರ ಶಾಸಕ ಬಿ.ಎ. ಮೊಹಿಯುದ್ದೀನ್ ಬಾವಾ ಪ್ರಶ್ನೆಗೆ ಲಿಖಿತ ಉತ್ತರ ನೀಡಿ, ಸುರತ್ಕಲ್ ಹಾಗೂ ಹೆಜಮಾಡಿಯಲ್ಲಿ ಇರುವ ಟೋಲ್ ಪ್ಲಾಜಾಗಳು ತಾತ್ಕಾಲಿಕವಾಗಿದ್ದು, ಇವೆರಡನ್ನು ವಿಲೀನಗೊಳಿಸುವ ಬಗ್ಗೆ ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಗಳೂರು ಯೋಜನಾ ಅನುಷ್ಠಾನ ಘಟಕದಿಂದ ಪ್ರಸ್ತಾವನೆಯನ್ನು ಪ್ರಾಧಿಕಾರದ ಬೆಂಗಳೂರು ಚೀಫ್ ಜನರಲ್ ಮ್ಯಾನೇಜರ್ ಕಚೇರಿಗೆ ಸಲ್ಲಿಸಲಾಗಿದೆ. ಈ ಪ್ರಸ್ತಾವನೆಯನ್ನು ಸದ್ಯದಲ್ಲೇ ರಾಜ್ಯ ಸರಕಾರದ ಸಹಮತಿಗಾಗಿ ಸಲ್ಲಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ತಿಳಿಸಿದೆ ಎಂದು ಸಚಿವರು ತಿಳಿಸಿದ್ದಾರೆ. ಹೆಜಮಾಡಿಯಲ್ಲಿ ಶಾಶ್ವತ ಟೋಲ್ಗೇಟ್ ನಿರ್ಮಿಸಿದ ಬಳಿಕ ಸುರತ್ಕಲ್ ಟೋಲ್ಗೇಟ್ ರದ್ದುಗೊಳಿಸುವ ಪ್ರಸ್ತಾವನೆ ಇತ್ತು ಎಂದು ಲೋಕೋಪಯೋಗಿ ಸಚಿವರು ತಿಳಿಸಿದ್ದಾರೆ.
ಕೇವಲ 5 ಕಿ.ಮೀ. ವ್ಯಾಪ್ತಿಯೊಳಗೆ ಎರಡೆರಡು ಟೋಲ್ಗೇಟ್ ಕಾರ್ಯನಿರ್ವಹಿಸುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆಯೇ ಎಂದು ಶಾಸಕ ಬಿ.ಎ. ಮೊಹಿದೀನ್ ಬಾವಾ ವಿಧಾನಸಭೆಯಲ್ಲಿ ಪ್ರಶ್ನಿಸಿದ್ದರು.