ಮಂಗಳೂರು, ಮೇ31(Daijiworld News/SS): ಜಿಲ್ಲೆಯಲ್ಲಿ ಯಾಂತ್ರೀಕೃತ ಮತ್ತು ಸಾಂಪ್ರದಾಯಿಕ ದೋಣಿಗಳ ಮುಖಾಂತರ ನಡೆಸುವ ಮೀನುಗಾರಿಕೆ ಚಟುವಟಿಕೆಯನ್ನು ಜೂ. 1ರಿಂದ ಜು. 31ರ ವರೆಗೆ ನಿಷೇಧಿಸಿ ಸರಕಾರ ಆದೇಶ ಹೊರಡಿಸಿದೆ.
ಈ ವರ್ಷದ ಮೀನುಗಾರಿಕೆ ಋತು ಇಂದು ಅಂತ್ಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಮೀನುಗಾರಿಕೆಗೆಂದು ಕಡಲಿಗಿಳಿದಿದ್ದ ಬೋಟುಗಳು ದಡ ಸೇರುತ್ತಿವೆ. ಮಂಗಳೂರು ಮೀನುಗಾರಿಕಾ ಧಕ್ಕೆಯಿಂದ ಕಾರ್ಯಾಚರಿಸುತ್ತಿದ್ದ ಸುಮಾರು 800ರಷ್ಟು ಬೋಟುಗಳು ಈಗಾಗಲೇ ಧಕ್ಕೆಗೆ ವಾಪಾಸಾಗಿದ್ದು, ಸುಮಾರು 200ರಷ್ಟು ಬೋಟುಗಳು ಇಂದು ಸಂಜೆ ವೇಳೆಗೆ ವಾಪಾಸಾಗಿದೆ.
ಯಾಂತ್ರೀಕೃತ ಮೀನುಗಾರಿಕೆಗೆ ರಜೆ ಸಂದರ್ಭ ನಾಡದೋಣಿಗಳು ಮೀನು ಬೇಟೆಗೆ ಇಳಿಯುತ್ತವೆ. ದೋಣಿ-ಬಲೆಯೊಂದಿಗೆ ಕಡಲಿಗೆ ಇಳಿಯುವ ಇವರು 10 ಅಶ್ವಶಕ್ತಿಯ ಎಂಜಿನ್ ಅಳವಡಿಸಿದ ದೋಣಿಗಳಲ್ಲಿ ಸಮುದ್ರದ ಬದಿ, ನದಿಗಳಲ್ಲಿ ಜೂ. 1ರಿಂದ ಮೀನುಗಾರಿಕೆ ನಡೆಸುತ್ತಾರೆ.
ಈ ವರ್ಷದ ಮೀನುಗಾರಿಕೆ ಋತುವಿನಲ್ಲಿ ಒಟ್ಟು 3,166 ಕೋಟಿ ರೂಪಾಯಿ ಮೌಲ್ಯದ 2,77,747 ಟನ್ ಮೀನು ಹಿಡಿಯಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಮೀನುಗಾರಿಕೆ ಪ್ರಮಾಣ ಮತ್ತು ಮೌಲ್ಯ ಎರಡೂ ದೃಷ್ಟಿಯಿಂದ ಕುಸಿತ ಕಂಡು ಬಂದಿದೆ.