ಕುಂದಾಪುರ, ಸೆ.24(DaijiworldNews/AA): ನಾಪತ್ತೆಯಾಗಿದ್ದ ವೃದ್ಧರೊಬ್ಬರ ಮೃತದೇಹ ರುಂಡವಿಲ್ಲದ ಸ್ಥಿತಿಯಲ್ಲಿ ಗುಜ್ಜಾಡಿ ಗ್ರಾಮದ ಕಳಿಹಿತ್ಲುವಿನ ಪಂಚಗಂಗಾವಳಿ ಹೊಳೆಯಲ್ಲಿ ಪತ್ತೆಯಾಗಿತ್ತು. ಇದೀಗ ರುಂಡವಿಲ್ಲದ ಮೃತದೇಹ ಪತ್ತೆಯಾಗಿ 3 ದಿನ ಕಳೆದರೂ ಇನ್ನು ತಲೆ ಮಾತ್ರ ಪತ್ತೆಯಾಗಿಲ್ಲ.
ಗುಡ್ಡಮ್ಮಾಡಿ ಗ್ರಾಮದ ಕರುಣಾಕರ ಶೆಟ್ಟಿ (72) ಅವರ ಮೃತದೇಹವು ಶನಿವಾರ ರುಂಡವಿಲ್ಲದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದೀಗ ಅವರ ಮೃತದೇಹದ ರುಂಡ ಪತ್ತೆಯಾಗದ ಹಿನ್ನೆಲೆ ನಿನ್ನೆಯೂ ರುಂಡಕ್ಕಾಗಿ ಗಂಗೊಳ್ಳಿ ಠಾಣಾ ಪೊಲೀಸರ ನೇತೃತ್ವದಲ್ಲಿ ಶೋಧ ಕಾರ್ಯ ನಡೆಸಲಾಯಿತು.
ಗಂಗೊಳ್ಳಿ ಎಸ್ಐ ಹರೀಶ್ ಆರ್. ಮಾರ್ಗದರ್ಶನದಲ್ಲಿ ಸಿಬ್ಬಂದಿಯ ಸಹಕಾರದೊಂದಿಗೆ ಸ್ಥಳೀಯ ಮುಳುಗು ತಜ್ಞ ದಿನೇಶ್ ಖಾರ್ವಿ ನೇತೃತ್ವದಲ್ಲಿ ಕರುಣಾಕರ ಶೆಟ್ಟಿ ಅವರ ರುಂಡಕ್ಕಾಗಿ ಹುಡುಕಾಟ ನಡೆಸಲಾಯಿತು. ಇನ್ನು ಈ ಶೋಧ ಕಾರ್ಯದಲ್ಲಿ ಸ್ಥಳೀಯ ಮೀನುಗಾರರು ಸಹ ಭಾಗಿಯಾದರು. ದೋಣಿಯ ಮೂಲಕವೂ ರುಂಡಕ್ಕಾಗಿ ಶೋಧ ಕಾರ್ಯಾಚರಣೆ ನಡೆಯಿತು.