ಕಾರ್ಕಳ, ಮೇ 31 (Daijiworld News/SM): ಐತಿಹಾಸಿಕ ರಾಮಸಮುದ್ರ ಮಾಲಿನಗೊಂಡಿದ್ದು, ಅಲ್ಲಿನ ನೀರನ್ನೇ ಪುರಸಭೆಯು ನಾಗರಿಕರಿಗೆ ನೀಡುತ್ತಿದೆ ಎಂಬ ಆಘಾತಕಾರಿ ವರದಿಯೊಂದನ್ನು ದಾಯ್ಜಿವರ್ಲ್ಡ್ ಪ್ರಸಾರ ಮಾಡಿತು. ಇದರ ಬಗ್ಗೆ ಕುಲಂಕುಷವಾಗಿ ವಿಚಾರಣೆ ನಡೆಸಿ ವರದಿ ನೀಡುವಂತೆ ಜಿಲ್ಲಾಡಳಿತವು ಕಾರ್ಕಳ ಪುರಸಭೆಗೆ ಅದೇಶಿಸಿದೆ.
ಇದರ ಹಿನ್ನಲ್ಲೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ರೇಖಾ ಶೆಟ್ಟಿ ನೇತೃತ್ವದಲ್ಲಿ ತಂಡವೊಂದು ಶುಕ್ರವಾರದಂದು ರಾಮಸಮುದ್ರ ಪರಿಸರಕ್ಕೆ ಭೇಟಿ ನೀಡಿದರು. ಪಕ್ಕದ ಸ್ಮನಾನದಲ್ಲಿ ಶೇಖರಣೆಯಾಗುವ ಬೂದಿ ಇದೇ ಕೆರೆಗೆ ಲೀನವಾಗುತ್ತಿದೆ. ಮತ್ತೊಂದು ಪಾರ್ಶ್ವದಲ್ಲಿ ಇರುವ ನಕ್ಸಲ್ ನಿಗ್ರಹ ದಳ ಕ್ಯಾಂಪ್ನ ಶೌಚಾಯಲಯದ ಮಾಲೀನ ನೀರನ್ನು ಇದೇ ಕೆರೆಗೆ ಬಿಡಲಾಗುತ್ತಿದೆ ಎಂಬ ಮಹತ್ವದ ವಿಚಾರ ಬಹಿರಂಗಗೊಂಡಿದೆ.
ಮಾಲಿನಿ ನೀರು ರಾಮಸಮುದ್ರಕ್ಕೆ ಬಿಡದಂತೆ ನೋಟಿಸ್ ಜಾರಿ
ತುರ್ತು ಸಂದರ್ಭಗಳಲ್ಲಿ ಪುರಸಭಾ ವ್ಯಾಪ್ತಿಗೆ ಕುಡಿಯಲು ಬಳಸಲಾಗುವ ರಾಮಸಮುದ್ರಕ್ಕೆ ನಕ್ಸಲ್ ನಿಗ್ರಹ ದಳದ ಕ್ಯಾಂಪ್ ಶೌಚಾಲಯದ ತ್ಯಾಜ್ಯವನ್ನು ರಾಮಸಮುದ್ರಕ್ಕೆ ಬಿಡಲಾಗುತ್ತಿತ್ತು. ಈ ಕುರಿತು ವರ್ಷದ ಹಿಂದೆ ದಾಯ್ಜಿವರ್ಲ್ಡ್ ವರದಿ ಪ್ರಸಾರ ಮಾಡಿತು. ಪರಿಣಾಮವಾಗಿ ತ್ಯಾಜ್ಯ ಶುದ್ಧೀಕರಣ ಘಟಕವನ್ನು ಆರಂಭಿಸಲಾಯಿತು. ತ್ಯಾಜ್ಯ ಶುದ್ಧೀಕರಣ ಘಟಕದಿಂದ ಹೊರ ಹೋಗುವ ನೀರನ್ನು ನೇರವಾಗಿ ರಾಮಸಮುದ್ರಕ್ಕೆ ಬಿಡಲಾಗುತ್ತಿದೆ. ಈ ವಿಚಾರ ತಿಳಿದುಕೊಂಡ ಪುರಸಭಾ ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ಗರಂಗೊಂಡಿದ್ದಾರೆ. ಅಲ್ಲದೆ ಕಾನೂನು ಉಲ್ಲಂಘಿಸಿದರೆ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಸ್ಮಶಾನ ಅಭಿವೃದ್ಧಿಗೆ ಯೋಜನೆ
ರಾಮಸಮುದ್ರದ ತುತ್ತತುದಿಯಲ್ಲಿ ಇರುವ ಸ್ಮಶಾನದ ಅಭಿವೃದ್ಧಿಗೆ ಪುರಸಭೆ ಯೋಜನೆ ಹಾಕಿಕೊಂಡಿದೆ. ವಾರಕೊಮ್ಮೆ ಪುರಸಭಾ ಪೌರಕಾರ್ಮಿಕರಿಂದ ಸ್ವಚ್ಛಕಾರ್ಯ ಕೈಗೊಳ್ಳುವುದು, ಸ್ಮಶಾನ ಬೂದಿಯನ್ನು ಗಟಾರದಲ್ಲಿ ಹಾಕುವುದು, ಅಲ್ಲಿ ಉತ್ಪನ್ನವಾಗುವ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳುವ ಕುರಿತು ಕೌನ್ಸಿಲರ್ ಶುಭದರಾವ್, ಸುಮಕೇಶವ್, ಯೋಗೀಶ್ ದೇವಾಡಿಗ ಇದೇ ಸಂದರ್ಭದಲ್ಲಿ ಸಲಹೆ ನೀಡಿದರು.