ಮಂಗಳೂರು, ಸೆ.24(DaijiworldNews/AK): ನಗರದ ವೆಲೆನ್ಸಿಯಾ ನಿವಾಸಿ ಹಾಗೂ ರಾಜ್ಯದ ಹಿರಿಯ ಸಾಮಾಜಿಕ ಹೋರಾಟಗಾರ ಪಿ.ಬಿ.ಡೇಸಾ (83) ಅವರು ಇಂದು ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಮೃತರು ಅಗಲಿದ್ದಾರೆ. ಪೀಪಲ್ಸ್ ಯೂನಿಯನ್ ಫಾರ್ ಲಿಬರ್ಟೀಸ್ (ಪಿಯುಸಿಎಲ್) ರಾಜ್ಯಾಧ್ಯಕ್ಷರಾಗಿದ್ದ ಇವರು ಸಮಾಜದಲ್ಲಿ ನಡೆಯುವ ಅನ್ಯಾಯ, ಅಕ್ರಮದ ವಿರುದ್ಧ ಧ್ವನಿ ಎತ್ತಿದವರಾಗಿದ್ದರು.ಅದರಲ್ಲೂ ಪೊಲೀಸರ ದೌರ್ಜನ್ಯದ ವಿರುದ್ಧ ಸಂಘಟಿತ ಹೋರಾಟ ಮಾಡುವಲ್ಲಿ ಮುಂಚೂಣಿಯಲ್ಲಿದ್ದರು.
ಯಾವುದೇ ಧಾರ್ಮಿಕ ಕ್ರಿಯೆ ನಡೆಸದೆ ಮೃತದೇಹವನ್ನು ನಗರದ ಖಾಸಗಿ ಆಸ್ಪತ್ರೆಗೆ ನಾಳೆ ಹಸ್ತಾಂತರ ಮಾಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಅನ್ಯಾಯ, ಅಕ್ರಮದ ವಿರುದ್ಧ ಹೋರಾಟ ಮಾಡುವ ಸಂದರ್ಭ ಅನೇಕ ಮಂದಿಯ ಪ್ರತಿರೋಧ ಎದುರಿಸುತ್ತಿದ್ದರು. ಹಿಂದೊಮ್ಮೆ ಅವರ ಕಚೇರಿಯಲ್ಲೇ ಕೊಲೆಯತ್ನವೂ ನಡೆದಿತ್ತು.